ADVERTISEMENT

ಹಣದುಬ್ಬರ ಅತ್ಯಲ್ಪ ಇಳಿಕೆ, ರೆಪೊ ಹೆಚ್ಚಳ ಸಾಧ್ಯತೆ

ಪಿಟಿಐ
Published 13 ಜುಲೈ 2022, 7:27 IST
Last Updated 13 ಜುಲೈ 2022, 7:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಚಿಲ್ಲರೆ ಹಣದುಬ್ಬರ ದರವು ಜೂನ್‌ ತಿಂಗಳಲ್ಲಿ ಶೇಕಡ 7.01ರಷ್ಟಾಗಿದೆ. ಮೇ ತಿಂಗಳಲ್ಲಿ ದಾಖಲಾಗಿದ್ದ ಶೇ 7.04ಕ್ಕೆ ಹೋಲಿಸಿದರೆ, ಅತ್ಯಲ್ಪ ಇಳಿಕೆ ಕಂಡಿದೆ. ಆದರೆ, ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ನಿಗದಿ ಮಾಡಿಕೊಂಡಿರುವ ಮಿತಿಗಿಂತ (ಶೇ 6) ಹೆಚ್ಚಿನ ಮಟ್ಟದಲ್ಲಿಯೇ ಉಳಿದಿದೆ.

ಇದರಿಂದಾಗಿ, ಆರ್‌ಬಿಐ ಮುಂದಿನ ದಿನಗಳಲ್ಲಿ ರೆಪೊ ದರವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಜೂನ್‌ ತಿಂಗಳ ಅಂಕಿ–ಅಂಶವನ್ನೂ ಪರಿಗಣಿಸಿದರೆ ಹಣದುಬ್ಬರವು ಸತತ ಆರು ತಿಂಗಳಿನಿಂದ ಆರ್‌ಬಿಐ ಮಿತಿಗಿಂತ ಹೆಚ್ಚಿನ ಮಟ್ಟದಲ್ಲಿ ಉಳಿದಂತಾಗಿದೆ.

ದೇಶದ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆ ಪ್ರಮಾಣವು ಮೇ ತಿಂಗಳಲ್ಲಿ 12 ತಿಂಗಳ ಗರಿಷ್ಠ ಮಟ್ಟವಾದ ಶೇ 19.6ಕ್ಕೆ ತಲುಪಿದೆ. ಏಪ್ರಿಲ್‌ ತಿಂಗಳಲ್ಲಿ ಇದು ಶೇ 6.7ರಷ್ಟು ಇತ್ತು.

ADVERTISEMENT

ಪ್ರತಿ ಉತ್ಪನ್ನದ ಬೆಲೆಯ ಮೇಲೆ ನಿಗಾ ಇರಿಸುವುದು ಹಾಗೂ ಹಣದುಬ್ಬರದ ಮೇಲಿನ ನಿಖರ ದಾಳಿಯು ಮುಂದುವರಿಯಬೇಕಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ‘ಆರ್‌ಬಿಐ ಅಂದಾಜು ಮಾಡಿರುವಂತೆ, ಹಣಕಾಸು ವರ್ಷದ ದ್ವಿತೀಯಾರ್ಧ ಶುರುವಾಗುವವರೆಗೆ ಆರ್‌ಬಿಐ ಮತ್ತು ಸರ್ಕಾರ ಎಚ್ಚರಿಕೆ ವಹಿಸಬೇಕಿದೆ’ ಎಂದು ನಿರ್ಮಲಾ ಹೇಳಿದ್ದಾರೆ.

‘ಅಗತ್ಯ ವಸ್ತುಗಳ ಬೆಲೆಯ ಮೇಲೆ ನಾನು ಕಣ್ಣಿಡುತ್ತೇನೆ’ ಎಂದೂ ನಿರ್ಮಲಾ ಭರವಸೆ ನೀಡಿದ್ದಾರೆ. ಏಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ ಹಣದುಬ್ಬರ ಪ್ರಮಾಣವು ಸರಾಸರಿ ಶೇ 7.3ರಷ್ಟು ದಾಖಲಾಗಿದೆ. ಇದು ಆರ್‌ಬಿಐ ಅಂದಾಜಿಗಿಂತ (ಶೇ 7.5) ತುಸು ಕಡಿಮೆ.

ಹಣದುಬ್ಬರದ ಪ್ರಮಾಣ ತೀರ್ಮಾನಿಸುವಲ್ಲಿ ಮುಖ್ಯ ‍ಪಾತ್ರ ವಹಿಸುವ ಆಹಾರ ವಸ್ತುಗಳ ಬೆಲೆಯು ಹೆಚ್ಚಿನ ಮಟ್ಟದಲ್ಲಿಯೇ ಇರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ರೂಪಾಯಿ ಮೌಲ್ಯ ಕುಸಿಯುತ್ತಲೇ ಇರುವ ಕಾರಣ, ಆಮದು ಮಾಡಿಕೊಳ್ಳುವ ಸರಕುಗಳ ಬೆಲೆ ಜಾಸ್ತಿ ಆಗುವ ಸಾಧ್ಯತೆ ಹೆಚ್ಚಿದೆ. ರಷ್ಯಾದಿಂದ ಕಚ್ಚಾ ತೈಲವನ್ನು ರಿಯಾಯಿತಿ ಬೆಲೆಗೆ ತರಿಸಿಕೊಳ್ಳುತ್ತಿರುವುದು ಹಾಗೂ ವಿದೇಶಿ ವಿನಿಮಯವನ್ನು ಕಾಪಿಟ್ಟುಕೊಳ್ಳಲು ಆರ್‌ಬಿಐ ಕ್ರಮ ಕೈಗೊಂಡಿರುವುದು ಸಮಸ್ಯೆಯ ತೀವ್ರತೆಯನ್ನು ತುಸು ಕಡಿಮೆ ಮಾಡಬಹುದು’ ಎಂದು ವಿಶ್ಲೇಷಕ ಸುಮನ್ ಚೌಧರಿ ಹೇಳಿದ್ದಾರೆ.

ಜುಲೈ ತಿಂಗಳ ಹಣದುಬ್ಬರ ಪ್ರಮಾಣವು ಜೂನ್‌ ತಿಂಗಳ ಮಟ್ಟಕ್ಕಿಂತ ಶೇ 0.20ರಿಂದ ಶೇ 0.30ರಷ್ಟು ಜಾಸ್ತಿ ಆಗಬಹುದು ಎಂಬ ಅಂದಾಜು ಇದೆ. ಹೀಗಾಗಿ, ಆರ್‌ಬಿಐ ರೆಪೊ ದರವನ್ನು ಶೇ 0.35ರವರೆಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್ ರಿಸರ್ಚ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.