ADVERTISEMENT

ಎಂಟು ವರ್ಷಗಳ ಕನಿಷ್ಠ ಮಟ್ಟಕ್ಕೆ ಹಣದುಬ್ಬರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 16:03 IST
Last Updated 12 ಆಗಸ್ಟ್ 2025, 16:03 IST
   

ನವದೆಹಲಿ: ಚಿಲ್ಲರೆ ಹಣದುಬ್ಬರ ಪ್ರಮಾಣವು ಜುಲೈನಲ್ಲಿ ಶೇಕಡ 1.55ಕ್ಕೆ ಇಳಿಕೆ ಕಂಡಿದೆ. ಇದು ಎಂಟು ವರ್ಷಗಳ ಕನಿಷ್ಠ ಮಟ್ಟ.

ಅಷ್ಟೇ ಅಲ್ಲ, ಚಿಲ್ಲರೆ ಹಣದುಬ್ಬರ ದರವು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿಗದಿ ಮಾಡಿಕೊಂಡಿರುವ ಗುರಿಯಾದ ಶೇ 2–4ರ ಮಟ್ಟಕ್ಕಿಂತ ಕೆಳಕ್ಕೆ ಬಂದಿರುವುದು 2019ರ ಜನವರಿಯ ನಂತರದಲ್ಲಿ ಇದೇ ಮೊದಲು.

ಆಹಾರ ವಸ್ತುಗಳ ಬೆಲೆಯು ಕಡಿಮೆ ಇದ್ದುದು ಚಿಲ್ಲರೆ ಹಣದುಬ್ಬರ ಪ್ರಮಾಣವು ಕಡಿಮೆ ಆಗಲು ಒಂದು ಮುಖ್ಯ ಕಾರಣ ಎಂದು ಕೇಂದ್ರ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ.

ADVERTISEMENT

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 4ರ ಹಂತದಲ್ಲಿ ಇರಬೇಕು, ಅದು ಶೇ 2ಕ್ಕಿಂತ ಕಡಿಮೆ ಆಗಬಾರದು, ಶೇ 6ಕ್ಕಿಂತ ಹೆಚ್ಚಾಗಬಾರದು ಎಂಬುದು ಆರ್‌ಬಿಐಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಗುರಿ.

ಚಿಲ್ಲರೆ ಹಣದುಬ್ಬರ ಪ್ರಮಾಣವು ಜೂನ್‌ನಲ್ಲಿ ಶೇ 2.1ರಷ್ಟು ದಾಖಲಾಗಿತ್ತು, ಹಿಂದಿನ ವರ್ಷದ ಜುಲೈನಲ್ಲಿ ಶೇ 3.6ರಷ್ಟು ಇತ್ತು. ಈ ವರ್ಷದ ಜುಲೈನಲ್ಲಿ ದಾಖಲಾಗಿರುವ ಹಣದುಬ್ಬರ ಪ್ರಮಾಣವು 2017ರ ಜೂನ್‌ ನಂತರದ ಅತ್ಯಂತ ಕನಿಷ್ಠ ಮಟ್ಟ. ಆ ತಿಂಗಳಲ್ಲಿ ಹಣದುಬ್ಬರ ಪ್ರಮಾಣವು ಶೇ 1.46ರಷ್ಟು ಇತ್ತು.

‘ದ್ವಿದಳ ಧಾನ್ಯಗಳು ಮತ್ತು ಅವುಗಳ ಉತ್ಪನ್ನಗಳು, ಸಾರಿಗೆ ಮತ್ತು ಸಂವಹನ, ತರಕಾರಿಗಳು, ಏಕದಳ ಧಾನ್ಯಗಳು ಮತ್ತು ಅವುಗಳ ಉತ್ಪನ್ನಗಳು, ಮೊಟ್ಟೆ ಮತ್ತು ಸಕ್ಕರೆ ಬೆಲೆ ಏರಿಕೆಯ ಪ್ರಮಾಣ ತಗ್ಗಿದೆ. ಇದು ಒಟ್ಟಾರೆ ಹಣದುಬ್ಬರದ ಪ್ರಮಾಣ ಹಾಗೂ ಆಹಾರ ವಸ್ತುಗಳ ಹಣದುಬ್ಬರದ ಪ್ರಮಾಣವು ಜುಲೈ ತಿಂಗಳಲ್ಲಿ ಗಮನಾರ್ಹವಾಗಿ ಇಳಿಕೆ ಆಗಿರುವುದಕ್ಕೆ ಪ್ರಮುಖ ಕಾರಣ’ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಹೇಳಿದೆ.

ಎನ್‌ಎಸ್‌ಒ ನೀಡಿರುವ ಮಾಹಿತಿ ಪ್ರಕಾರ ಜುಲೈನಲ್ಲಿ ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಶೇ (–)1.76 ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಣದುಬ್ಬರ ಪ್ರಮಾಣವು ಶೇ 1.18ರಷ್ಟು ಹಾಗೂ ನಗರ ಪ್ರದೇಶಗಳಲ್ಲಿ ಶೇ 2.05ರಷ್ಟು ಇದೆ.

ಚಿಲ್ಲರೆ ಹಣದುಬ್ಬರ ದರಕ್ಕೆ ಸಂಬಂಧಿಸಿದ ದತ್ತಾಂಶಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಅವರು, ‘ಪ್ರಸಕ್ತ ಹಣಕಾಸು ವರ್ಷದ ನಾಲ್ಕನೆಯ ತ್ರೈಮಾಸಿಕದಲ್ಲಿ ಹಾಗೂ ಮುಂದಿನ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹಣದುಬ್ಬರ ಪ್ರಮಾಣವು ಶೇ 4ಕ್ಕಿಂತ ಹೆಚ್ಚಿರಲಿದೆ ಎಂಬ ನಿರೀಕ್ಷೆಯು, ಆರ್‌ಬಿಐನ ಮುಂಬರುವ ಸಭೆಗಳಲ್ಲಿ ರೆಪೊ ದರ ಇಳಿಸುವ ಸಾಧ್ಯತೆಯನ್ನು ಕಡಿಮೆ ಮಾಡಿದೆ’ ಎಂದು ಹೇಳಿದ್ದಾರೆ.

‘ಈಗಿನ ಪ್ರಮಾಣದ ಹಣದುಬ್ಬರವು ಅರ್ಥ ವ್ಯವಸ್ಥೆಯಲ್ಲಿ ಬೇಡಿಕೆಯ ಕುರಿತಾಗಿ ಕಳವಳದ ಗಂಟೆಯನ್ನು ಸಹಜವಾಗಿಯೇ ಬಾರಿಸುತ್ತಿತ್ತು. ಆದರೆ ಆಹಾರ ಮತ್ತು ಇಂಧನದಂತಹ ಉತ್ಪನ್ನಗಳನ್ನು ಹೊರತುಪಡಿಸಿ ಇತರ ವರ್ಗಗಳಲ್ಲಿನ ಹಣದುಬ್ಬರ ಪ್ರಮಾಣವು ಜುಲೈನಲ್ಲಿ ಶೇ 4.1ರಷ್ಟು ಇದೆ. ಅಂದರೆ ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯು ಸ್ಥಿರವಾಗಿ ಇದೆ ಎಂದು ಅರ್ಥ’ ಎಂದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ ಸಂಸ್ಥೆಯ ಸಹನಿರ್ದೇಶಕ ಪಾರಸ್ ಜಸರಾಯ್ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ನಾಲ್ಕನೆಯ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 4ಕ್ಕಿಂತ ಹೆಚ್ಚಿನ ಮಟ್ಟವನ್ನು ತಲುಪುವ ಅಂದಾಜು ಇದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ತಿಂಗಳ ಆರಂಭದಲ್ಲಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.