ನವದೆಹಲಿ: ಜಿಎಸ್‌ಟಿ ಸರಳೀಕರಣದಿಂದ ಮುಂದಿನ ಆರ್ಥಿಕ ವರ್ಷದಲ್ಲಿ ದೇಶದ ಚಿಲ್ಲರೆ ಹಣದುಬ್ಬರವು ಶೇ 0.65ರಿಂದ ಶೇ 0.75ರಷ್ಟು ಇಳಿಕೆ ಆಗಲಿದೆ ಎಂದು ಎಸ್‌ಬಿಐ ರಿಸರ್ಚ್ ತಿಳಿಸಿದೆ.
ಮನೆ ಬಳಕೆಯ ಅಗತ್ಯ ವಸ್ತುಗಳು ಮತ್ತು ಸೇವೆಗಳ ಮೇಲಿನ ತೆರಿಗೆಯು ಜಿಎಸ್‌ಟಿ ಸರಳೀಕರಣದಿಂದ ಕಡಿಮೆ ಆಗಲಿದೆ. ಇದು ಚಿಲ್ಲರೆ ಹಣದುಬ್ಬರ ಇಳಿಕೆಗೆ ನೆರವಾಗಲಿದೆ ಎಂದು ತಿಳಿಸಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಜಿಎಸ್‌ಟಿ ಮಂಡಳಿಯು, ಪ್ರಸ್ತುತವಿರುವ ನಾಲ್ಕು ಹಂತದ ತೆರಿಗೆಗಳನ್ನು ಎರಡಕ್ಕೆ ಇಳಿಸಿದೆ. ಇದು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ.
ಅಗತ್ಯ ವಸ್ತುಗಳ (ಅಂದಾಜು 295 ಸರಕುಗಳು) ಮೇಲಿನ ತೆರಿಗೆ ಶೇ 12ರಿಂದ ಶೇ 5ಕ್ಕೆ ಇಳಿದಿದೆ ಅಥವಾ ಶೂನ್ಯವಾಗಿದೆ. ಹೀಗಾಗಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 0.25ರಿಂದ ಶೇ 0.30ರಷ್ಟು ಕಡಿಮೆಯಾಗಲಿದೆ.
ಅಲ್ಲದೆ, ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಸಹ ಇಳಿಕೆಯಾಗಿದ್ದು, ಶೇ 0.40ರಿಂದ ಶೇ 0.45ರಷ್ಟು ಹಣದುಬ್ಬರ ಕಡಿಮೆಯಾಗಲಿದೆ. ಒಟ್ಟಾರೆ, ಮುಂದಿನ ಆರ್ಥಿಕ ವರ್ಷದ ವೇಳೆಗೆ ಹಣದುಬ್ಬರ ಶೇ 0.65ರಿಂದ ಶೇ 0.75ರಷ್ಟು ಇಳಿಕೆ ಆಗಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.