ADVERTISEMENT

Retail Inflation Drop: ಚಿಲ್ಲರೆ ಹಣದುಬ್ಬರ ಇಳಿಕೆ

ಪಿಟಿಐ
Published 13 ಅಕ್ಟೋಬರ್ 2025, 16:16 IST
Last Updated 13 ಅಕ್ಟೋಬರ್ 2025, 16:16 IST
   

ನವದೆಹಲಿ: ಸೆಪ್ಟೆಂಬರ್‌ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಎಂಟು ವರ್ಷಗಳ ಕನಿಷ್ಠ ಮಟ್ಟವಾದ ಶೇಕಡ 1.54ಕ್ಕೆ ಇಳಿಕೆ ಕಂಡಿದೆ. ತರಕಾರಿಗಳು, ಹಣ್ಣು ಮತ್ತು ದ್ವಿದಳ ಧಾನ್ಯಗಳ ಬೆಲೆಯಲ್ಲಿನ ಇಳಿಕೆಯು ಹಣದುಬ್ಬರ ಪ್ರಮಾಣ ಕಡಿಮೆ ಆಗಲು ಕಾರಣವಾಗಿದೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ ಪ್ರಮಾಣವು ಆಗಸ್ಟ್‌ನಲ್ಲಿ ಶೇ 2.07ರಷ್ಟು ಇತ್ತು. ಇದು ಹಿಂದಿನ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಶೇ 5.49ರಷ್ಟು ಇತ್ತು. 2017ರ ಜೂನ್‌ ತಿಂಗಳಲ್ಲಿ ಹಣದುಬ್ಬರ ಪ್ರಮಾಣವು ಶೇ 1.47ರಷ್ಟು ಆಗಿತ್ತು. ಅದಾದ ನಂತರದ ಕನಿಷ್ಠ ಮಟ್ಟವು ಈ ಸೆಪ್ಟೆಂಬರ್‌ನಲ್ಲಿ ದಾಖಲಾಗಿದೆ.

ಈ ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 2ಕ್ಕಿಂತ ಕೆಳಗಿನ ಮಟ್ಟಕ್ಕೆ ಬಂದಿರುವುದು ಇದು ಎರಡನೆಯ ಬಾರಿ. ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇ 2ರಿಂದ ಶೇ 6ರ ಒಳಗೆ ನಿಯಂತ್ರಿಸುವ ಹೊಣೆಯು ಆರ್‌ಬಿಐ ಮೇಲಿದೆ.

ADVERTISEMENT

ಗ್ರಾಮೀಣ ಪ್ರದೇಶಗಳಲ್ಲಿ ಹಣದುಬ್ಬರ ಪ್ರಮಾಣ ಶೇ 1.07ರಷ್ಟು, ನಗರ ಪ್ರದೇಶಗಳಲ್ಲಿ ಇದು ಶೇ 2.04ರಷ್ಟು ಆಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್‌ಒ) ನೀಡಿರುವ ಅಂಕಿ–ಅಂಶಗಳು ಹೇಳುತ್ತಿವೆ.

ಕೇರಳದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಹಣದುಬ್ಬರ (ಶೇ 9.05ರಷ್ಟು) ದಾಖಲಾಗಿದೆ. ಉತ್ತರ ಪ್ರದೇಶದಲ್ಲಿ ಶೇ (–)0.61ರಷ್ಟು ಹಣದುಬ್ಬರ ದಾಖಲಾಗಿದ್ದು, ಇದು ಅತ್ಯಂತ ಕನಿಷ್ಠ ಪ್ರಮಾಣ.

ಡಿಸೆಂಬರ್‌ನಲ್ಲಿ ಹಣಕಾಸು ನೀತಿ ಸಮಿತಿಯ ಸಭೆಯು ನಡೆಯಲಿದ್ದು, ಅಲ್ಲಿ ರೆಪೊ ದರವನ್ನು ಶೇ 0.25ರಷ್ಟು ಕಡಿಮೆ ಮಾಡುವ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.