ADVERTISEMENT

ಜನವರಿಯಲ್ಲಿ ಹಣದುಬ್ಬರ ಶೇ 2.75: ಎನ್‌ಎಸ್‌ಒ

ಪಿಟಿಐ
Published 12 ಫೆಬ್ರುವರಿ 2026, 15:45 IST
Last Updated 12 ಫೆಬ್ರುವರಿ 2026, 15:45 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಚಿಲ್ಲರೆ ಹಣದುಬ್ಬರ ಪ್ರಮಾಣವು ಜನವರಿಯಲ್ಲಿ ಶೇಕಡ 2.75ರಷ್ಟು ಆಗಿದೆ. ಈ ಬಾರಿಯಿಂದ ಸೂಚ್ಯಂಕಕ್ಕೆ 2024ನೇ ಇಸವಿಯನ್ನು ಮೂಲ ವರ್ಷವನ್ನಾಗಿ ಇರಿಸಿಕೊಳ್ಳಲಾಗುತ್ತದೆ.

ಚಿಲ್ಲರೆ ಹಣದುಬ್ಬರ ಅಳೆಯಲು 2024ನೇ ಇಸವಿಯನ್ನು ಮೂಲ ವರ್ಷವನ್ನಾಗಿಸಿಕೊಂಡ ಹೊಸ ಕ್ರಮವನ್ನು ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಗುರುವಾರ ಅನಾವರಣ ಮಾಡಿದೆ. ಇದರಲ್ಲಿ ಸರಕುಗಳ ಸಂಖ್ಯೆಯನ್ನು 259ರಿಂದ 308ಕ್ಕೆ ಹೆಚ್ಚಿಸಲಾಗಿದೆ, ಸೇವೆಗಳ ಸಂಖ್ಯೆಯನ್ನು 40ರಿಂದ 50ಕ್ಕೆ ಜಾಸ್ತಿ ಮಾಡಲಾಗಿದೆ.

ADVERTISEMENT

ಜನವರಿಯಲ್ಲಿ ಆಹಾರ ವಸ್ತುಗಳ ಬೆಲೆ ಏರಿಕೆ ಪ್ರಮಾಣ ಶೇ 2.13ರಷ್ಟು, ಮನೆಗಳ ಬೆಲೆ ಏರಿಕೆಯು ಶೇ 2.05ರಷ್ಟು ಇತ್ತು. 2012ನ್ನು ಮೂಲ ವರ್ಷವನ್ನಾಗಿ ಇರಿಸಿಕೊಂಡಿದ್ದ ಹಳೆಯ ಕ್ರಮದಲ್ಲಿ ಕಳೆದ ವರ್ಷದ ಜನವರಿಯ ಹಣದುಬ್ಬರ ಪ್ರಮಾಣ ಶೇ 4.26ರಷ್ಟು ಹಾಗೂ ಡಿಸೆಂಬರ್‌ನಲ್ಲಿ ಶೇ 1.33ರಷ್ಟು ಇತ್ತು.

ಜನವರಿಯಲ್ಲಿ ಹಣದುಬ್ಬರ ಪ್ರಮಾಣವು ಗ್ರಾಮಾಂತರ ಪ್ರದೇಶಗಳಲ್ಲಿ ಶೇ 2.73ರಷ್ಟು, ನಗರ ಪ್ರದೇಶಗಳಲ್ಲಿ ಶೇ 2.77ರಷ್ಟು ಇತ್ತು.

ಹೊಸ ಕ್ರಮದಲ್ಲಿ ಗ್ರಾಮೀಣ ಪ್ರದೇಶಗಳ ಮನೆ ದರ, ಆನ್‌ಲೈನ್‌ ಮಾಧ್ಯಮ ಸೇವೆಗಳು ಮತ್ತು ಒಟಿಟಿ ಸ್ಟ್ರೀಮಿಂಗ್‌ ಸೇವೆಗಳು, ಮೌಲ್ಯವರ್ಧಿತ ಡೈರಿ ಉತ್ಪನ್ನಗಳು, ಬಾರ್ಲಿ ಹಾಗೂ ಅದರ ಉತ್ಪನ್ನಗಳು, ಪೆನ್‌ಡ್ರೈವ್‌ ಮತ್ತು ಎಕ್ಸ್‌ಟರ್ನಲ್ ಹಾರ್ಡ್‌ಡಿಸ್ಕ್‌ನಂತಹ ಉತ್ಪನ್ನಗಳನ್ನು ಸೇರ್ಪಡೆ ಮಾಡಲಾಗಿದೆ.

ವಿಸಿಆರ್‌, ವಿಸಿಡಿ ಮತ್ತು ಡಿವಿಡಿ ಪ್ಲೇಯರ್‌ಗಳು; ರೇಡಿಯೊ, ಟೇಪ್‌ ರೆಕಾರ್ಡರ್‌, ಸಿಡಿ/ಡಿವಿಡಿ ಕ್ಯಾಸೆಟ್‌ಗಳನ್ನು ಕೈಬಿಡಲಾಗಿದೆ.

ಬೇರೆ ಬೇರೆ ಉತ್ಪನ್ನಗಳಿಗೆ ಸೂಚ್ಯಂಕದಲ್ಲಿ ನೀಡಿರುವ ಪ್ರಾಧಾನ್ಯವನ್ನು 2023–24ರ ಕುಟುಂಬಗಳ ಗ್ರಾಹಕ ವೆಚ್ಚ ಸಮೀಕ್ಷೆಯನ್ನು ಆಧರಿಸಿ ಬದಲಾಯಿಸಲಾಗಿದೆ. 2012ರ ಕ್ರಮದಲ್ಲಿ ಆಹಾರ ಮತ್ತು ಪಾನೀಯಗಳಿಗೆ ಶೇ 45.86ರಷ್ಟು ಪಾಲು ಇತ್ತು. ಅದನ್ನು ಈಗ ಶೇ 36.75ಕ್ಕೆ ಇಳಿಕೆ ಮಾಡಲಾಗಿದೆ.

ದತ್ತಾಂಶ ಗುಣಮಟ್ಟ ಸುಧಾರಣೆ: ನಾಗೇಶ್ವರನ್

ನವದೆಹಲಿ (ಪಿಟಿಐ): 2024ನೇ ಇಸವಿಯನ್ನು ಮೂಲವರ್ಷವನ್ನಾಗಿ ಇರಿಸಿಕೊಂಡಿರುವ ಹೊಸ ಸಿಪಿಐ ಸೂಚ್ಯಂಕವು ಹಣಕಾಸು ಮತ್ತು ವಿತ್ತೀಯ ನೀತಿ ರೂಪಿಸಲು ಬಳಸುವ ದತ್ತಾಂಶಗಳ ಗುಣಮಟ್ಟ ಸುಧಾರಿಸುತ್ತದೆ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಹೇಳಿದ್ದಾರೆ. ಹೊಸ ಕ್ರಮವು ಸೇವಾ ಮಾರುಕಟ್ಟೆ ಹಾಗೂ ಡಿಜಿಟಲ್ ಮಾರುಕಟ್ಟೆಯನ್ನು ಹೆಚ್ಚು ವ್ಯಾಪಕವಾಗಿ ಒಳಗೊಂಡಿದೆ. ಇದು ಜನರ ನೈಜ ಆದಾಯ ಮತ್ತು ಖರೀದಿ ಚಿತ್ರಣವನ್ನು ತಿಳಿಯಲು ನೀತಿ ನಿರೂಪಕರಿಗೆ ಹೆಚ್ಚು ನಿಖರವಾದ ಆಧಾರವನ್ನು ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ. ಹಣಕಾಸಿನ ನೀತಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಾಗ ಆರ್‌ಬಿಐ ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಪರಿಗಣಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.