ADVERTISEMENT

ಚಿಲ್ಲರೆ ಹಣದುಬ್ಬರ ಏರಿಕೆ, ಕೈಗಾರಿಕಾ ಬೆಳವಣಿಗೆ ಇಳಿಕೆ

ಮಂದಗತಿಯ ಆರ್ಥಿಕ ಬೆಳವಣಿಗೆಯ ಪರಿಣಾಮ

ಪಿಟಿಐ
Published 12 ಡಿಸೆಂಬರ್ 2019, 13:08 IST
Last Updated 12 ಡಿಸೆಂಬರ್ 2019, 13:08 IST
ಹಣದುಬ್ಬರ
ಹಣದುಬ್ಬರ    

ನವದೆಹಲಿ: ದೇಶದ ಆರ್ಥಿಕತೆಯು ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದೆ ಎನ್ನುವುದನ್ನು ಗುರುವಾರ ಬಿಡುಗಡೆ ಆಗಿರುವ ಚಿಲ್ಲರೆ ಹಣದುಬ್ಬರ ಮತ್ತು ಕೈಗಾರಿಕಾ ಉತ್ಪಾದನೆಯ ಅಂಕಿ–ಅಂಶಗಳು ಇನ್ನಷ್ಟು ಸ್ಪಷ್ಟಪಡಿಸಿವೆ.

ಚಿಲ್ಲರೆ ಹಣದುಬ್ಬರ ನವೆಂಬರ್‌ನಲ್ಲಿ ಶೇ 5.54ಕ್ಕೆ ಏರಿಕೆಯಾಗಿದೆ. ಇದು ಮೂರು ವರ್ಷಗಳ ಗರಿಷ್ಠ ಮಟ್ಟವಾಗಿದೆ. ಈ ಹಿಂದೆ 2016ರ ಜುಲೈನಲ್ಲಿ ಶೇ 6.07ರಷ್ಟು ಗರಿಷ್ಠ ಮಟ್ಟದಲ್ಲಿತ್ತು.

ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಗುರುವಾರ ಈ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಿದೆ.ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆ ಕಂಡಿಬಂದಿರುವುದರಿಂದ ಚಿಲ್ಲರೆ ಹಣದುಬ್ಬರದಲ್ಲಿಯೂ ಏರಿಕೆಯಾಗಿದೆ.ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಆಧಾರದ ಮೇಲೆ ಲೆಕ್ಕ ಹಾಕುವ ಚಿಲ್ಲರೆ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ 4.62ರಷ್ಟಿತ್ತು. 2018ರ ನವೆಂಬರ್‌ನಲ್ಲಿ ಶೇ 2.33ರಷ್ಟು ಬೆಳವಣಿಗೆ ಕಂಡಿತ್ತು.

ADVERTISEMENT

ಐಐಪಿ ಇಳಿಕೆ: ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಅಕ್ಟೋಬರ್‌ನಲ್ಲಿ ಶೇ 3.8ಕ್ಕೆ ಇಳಿಕೆಯಾಗಿದೆ. 2018ರ ಅಕ್ಟೋಬರ್‌ನಲ್ಲಿ ಶೇ 8.4ರಷ್ಟು ಗರಿಷ್ಠ ಮಟ್ಟದ ಬೆಳವಣಿಗೆ ಕಂಡಿತ್ತು.

ವಿದ್ಯುತ್‌, ಗಣಿಗಾರಿಕೆ ಮತ್ತು ಮೂಲಸೌಕರ್ಯ ವಲಯದ ಇಳಿಮುಖ ಬೆಳವಣಿಗೆಯು ಐಐಪಿ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.ಮೂಲಸೌಕರ್ಯ ವಲಯದ ಬೆಳವಣಿಗೆ ಅಕ್ಟೋಬರ್‌ನಲ್ಲಿ ಶೇ 8.2ರಿಂದ ಶೇ 2.1ಕ್ಕೆ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.