ನವದೆಹಲಿ: ಕಳೆದ ಮೂರು ತಿಂಗಳ ಅವಧಿಯಲ್ಲಿ ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ತೊಗರಿ ಮತ್ತು ಉದ್ದು ಧಾರಣೆಯು ಇಳಿಕೆಯಾಗಿದೆ ಅಥವಾ ಸ್ಥಿರವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಬೆಲೆ ನಿಯಂತ್ರಣ ಸಂಬಂಧ ನಿಯಮಿತವಾಗಿ ರಿಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಆರ್‌ಎಐ) ಹಾಗೂ ಸಗಟುದಾರರ ಸಭೆ ನಡೆಸುತ್ತದೆ. ಮಂಡಿ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ಬೇಳೆಕಾಳುಗಳ ಬೆಲೆ ಬಗ್ಗೆ ಪರಾಮರ್ಶೆ ನಡೆಸುತ್ತದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಮತ್ತು ಆಹಾರ ಖಾತೆಯ ರಾಜ್ಯ ಸಚಿವ ಬಿ.ಎಲ್. ವರ್ಮಾ ಅವರು, ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಬೇಳೆಕಾಳುಗಳ ಬೆಲೆ ಏರಿಕೆ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ. ಭಾರತ್ ಬ್ರ್ಯಾಂಡ್‌ನಡಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ವಿತರಿಸುತ್ತಿದೆ ಎಂದು ವಿವರಿಸಿದ್ದಾರೆ.
ಅಲ್ಲದೆ, ಗೋಧಿ ಹಿಟ್ಟು ಮತ್ತು ಅಕ್ಕಿಯನ್ನೂ ವಿತರಿಸಲಾಗುತ್ತಿದೆ. ಈರುಳ್ಳಿ ಬೆಲೆ ನಿಯಂತ್ರಣಕ್ಕೂ ಕ್ರಮವಹಿಸಿದೆ. ಚಿಲ್ಲರೆ ಮಳಿಗೆಗಳಲ್ಲಿ ರಿಯಾಯಿತಿ ದರದಡಿ ಈರುಳ್ಳಿ ಮಾರಾಟಕ್ಕೆ ಚಾಲನೆ ನೀಡಿದೆ. ಸರ್ಕಾರದ ಈ ಕ್ರಮದಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ದೇಶೀಯ ಬೇಡಿಕೆಗೆ ಅನುಗುಣವಾಗಿ ಬೇಳೆಕಾಳು ಆಮದಿಗೆ ಕ್ರಮವಹಿಸಿದೆ. 2025ರ ಮಾರ್ಚ್ ಅಂತ್ಯದವರೆಗೆ ತೊಗರಿ ಮತ್ತು ಉದ್ದನ್ನು ಆಮದು ಮುಕ್ತ ವರ್ಗದಲ್ಲಿ ಇರಿಸಿದೆ. ಇದೇ ಅವಧಿವರೆಗೆ ಚೆನ್ನಂಗಿಬೇಳೆ (ಮಸೂರ್ ದಾಲ್) ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸಲಾಗಿದೆ. ಕಡಲೆಕಾಳು ಆಮದು ಮೇಲಿನ ಸುಂಕವನ್ನು ರದ್ದುಪಡಿಸಿದೆ ಎಂದು ಹೇಳಿದ್ದಾರೆ.
10.66 ಲಕ್ಷ ರೈತರು
ನೋಂದಣಿ ಬೆಲೆ ಬೆಂಬಲ ಯೋಜನೆ ಮತ್ತು ಬೆಲೆ ಸ್ಥಿರೀಕರಣ ನಿಧಿಯಡಿ ತೊಗರಿ ಮತ್ತು ಉದ್ದು ಖರೀದಿಗೆ ಸರ್ಕಾರ ಕ್ರಮವಹಿಸಿದೆ ಎಂದು ಕೇಂದ್ರ ತಿಳಿಸಿದೆ. ಕೃಷಿ ಹುಟ್ಟುವಳಿಗಳಿಗೆ ಉತ್ತಮ ಬೆಲೆ ನೀಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಆಯ್ ಸಂರಕ್ಷಣಾ ಅಭಿಯಾನವನ್ನು (ಪಿಎಂ–ಆಶಾ) ಜಾರಿಗೊಳಿಸಿದೆ. ನಾಫೆಡ್ ಮತ್ತು ಎನ್‌ಸಿಸಿಎಫ್‌ನಿಂದ ಖರೀದಿ ಪ್ರಕ್ರಿಯೆ ನಡೆಯಲಿದ್ದು ನವೆಂಬರ್ 22ರ ವರೆಗೆ 10.66 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದೆ. ಮುಂಗಾರು ಅವಧಿಯಲ್ಲಿ ಕಾಳುಗಳ ಉತ್ಪಾದನೆ ಉತ್ತಮವಾಗಿದ್ದು ಹೆಸರುಕಾಳು ಉದ್ದು ಕೊಯ್ಲು ಮುಗಿದಿದೆ. ತೊಗರಿ ಕೊಯ್ಲು ಆರಂಭವಾಗಿದೆ. ಉತ್ತಮ ಹವಾಮಾನವು ಮಾರುಕಟ್ಟೆಗೆ ಬೇಳೆಕಾಳುಗಳ ಪೂರೈಕೆಗೆ ನೆರವಾಗಲಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಬೇಳೆಕಾಳುಗಳ ಬೆಲೆ ಇಳಿಕೆಯಾಗಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.