ADVERTISEMENT

ಆರೋಗ್ಯ ವಿಮೆ ಆಯ್ಕೆ ಹೇಗೆ?

ಗುರ್ದೀಪ್‌ ಸಿಂಗ್‌ ಬಾರ್ತಾ
Published 12 ಮೇ 2020, 20:00 IST
Last Updated 12 ಮೇ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಡೀ ಜಗತ್ತೇ ಸಂಕಷ್ಟಕ್ಕೀಡಾಗಿರುವ ಕಾಲಘಟ್ಟದಲ್ಲಿ ಇಂದು ನಾವಿದ್ದೇವೆ. ಹಿಂದೆಂದೂ ಯಾರೂ ಕೇಳದ, ಕನಿಷ್ಠ ಔಷಧವೂ ಇಲ್ಲದ ರೋಗವೊಂದಕ್ಕೆ ತುತ್ತಾಗುತ್ತಿದ್ದೇವೆ. ಇತ್ತೀಚೆಗೆ ಅಪ್ಪಳಿಸಿದ ಕೊರೊನಾ ವೈರಸ್ ಎಲ್ಲರಲ್ಲಿ ಭೀತಿ ಹುಟ್ಟಿಸಿದೆ. ಅಷ್ಟೇ ಏಕೆ ಇಡೀ ವಿಶ್ವವನ್ನೇ ಅಲುಗಾಡಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯೂ ಇದನ್ನು ಜಾಗತಿಕ ಪಿಡುಗು ಎಂದು ಘೋಷಿಸಿದೆ. ಇದಕ್ಕೂ ಮೊದಲು ಸಾರ್ಸ್‌, ನಿಫಾ, ಜಿಕಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಇದ್ದವು. ಅವು ಜನರಲ್ಲಿ ಭೀತಿ ಹುಟ್ಟಿಸುವ, ವ್ಯಾಪಿಸುವ ಮೊದಲೇ ಚಿಕಿತ್ಸೆ ಮೂಲಕ ನಿವಾರಿಸಲಾಯಿತು. ಇಂತಹ ಸಾಂಕ್ರಾಮಿಕ ರೋಗಗಳು ಬರುತ್ತವೆ ಮತ್ತು ಹೋಗುತ್ತವೆ. ಆದರೆ, ಇವುಗಳನ್ನು ಕೊನೆಗಾಣಿಸಲು ನಾವು ಆರ್ಥಿಕವಾಗಿ ಸದೃಢವಾಗಿದ್ದೇವೆಯೇ ಎಂಬುದು ಮುಖ್ಯವಾಗುತ್ತದೆ. ಸಾಮಾನ್ಯ ಆರೋಗ್ಯ ರಕ್ಷಣೆ ನೀತಿಯು ಕೋವಿಡ್‌ ಸೇರಿದಂತೆ ಸಾಂಕ್ರಮಿಕ ರೋಗಗಳನ್ನು ಒಳಗೊಂಡಿರುತ್ತದೆ.

ಉತ್ತಮ ಚಿಕಿತ್ಸೆ ಪಡೆಯಲು ಮತ್ತು ಚಿಕಿತ್ಸೆಯ ವೈದ್ಯಕೀಯ ವೆಚ್ಚವನ್ನು ಆರೋಗ್ಯ ವಿಮೆಯು ಭರಿಸುತ್ತದೆ. ಪ್ರಸಕ್ತ ದಿನಮಾನಗಳಲ್ಲಿ ವೈದ್ಯಕೀಯ ವೆಚ್ಚ- ದರ ಹೆಚ್ಚುತ್ತಿರುವ ಸಂದರ್ಭದಲ್ಲಿ ಆರೋಗ್ಯ ವಿಮೆ ಇಲ್ಲದೇ ಆಸ್ಪತ್ರೆಗೆ ದಾಖಲಾಗುವುದು ಕಷ್ಟ. ಆಸ್ಪತ್ರೆ ವೆಚ್ಚಗಳು ನಮ್ಮ ಉಳಿತಾಯ ಹಣವನ್ನು ಮತ್ತು ಜೇಬನ್ನು ಒಮ್ಮೆಲೆ ಖಾಲಿ ಮಾಡಿ ಬಿಡುತ್ತದೆ. ಇವೆಲ್ಲ ಖರ್ಚು- ವೆಚ್ಚ- ಆತಂಕಗಳ ಅರಿವಿದ್ದರೂ ನಮ್ಮಲ್ಲಿ ಆರೋಗ್ಯದ ಅಗತ್ಯಗಳಿಗೆ ಸರಿಹೊಂದುವ ವಿಮೆಯನ್ನು ಹೊಂದಿರುವವರು ಬಹಳ ಕಡಿಮೆ. ವಿಮೆಯು ಎಂತಹ ವಿಷಮ ಸ್ಥಿತಿಯಲ್ಲೂ ಧೈರ್ಯವನ್ನು ನೀಡುತ್ತದೆ. ಅಲ್ಲದೆ, ಸದಾ ಬೆನ್ನಿಗೆ ನಿಂತಿರುತ್ತದೆ. ಆರೋಗ್ಯ ವಿಮೆಯು ಕೊರೊನಾ ವೈರಸ್‌ನಂತಹ ಪಿಡುಗುಗಳಿಂದ ನಮ್ಮನ್ನು ರಕ್ಷಿಸುತ್ತದೆ. ವೈದ್ಯಕೀಯ ವೆಚ್ಚಗಳ ಬಗ್ಗೆ ವಿಮೆ ಇದ್ದರೆ ಸಾಕು. ಉಳಿದ ಯಾವುದೇ ಚಿಂತೆಯನ್ನೂ ಮಾಡಬೇಕಾಗಿಲ್ಲ. ವಿಮೆಯು ಮನಸ್ಸಿಗೂ ನಿರಾಳತೆಯನ್ನು ನೀಡುತ್ತದೆ. ಆದರೆ, ನೀವು ಆರೋಗ್ಯ ವಿಮೆಯನ್ನು ಹೊಂದುವುದಕ್ಕೂ ಮುನ್ನ ಈ ಬಹು ಮುಖ್ಯ ಅಂಶಗಳನ್ನು ಬಗ್ಗೆ ಯೋಚಿಸಬೇಕು.

ADVERTISEMENT

ಎಲ್ಲದಕ್ಕೂ ಅನ್ವಯ ಆಗುವ ವಿಮೆ ಆಯ್ಕೆ ಮಾಡುವುದು: ನಮ್ಮ ದೇಹಾರೋಗ್ಯ ಸ್ಥಿತಿಯನ್ನು ಆಧರಿಸಿ ಮತ್ತು ಮುಂದಾಲೋಚನೆಯಿಂದ ಹೊಂದಿಕೆಯಾಗುವ ಆರೋಗ್ಯ ವಿಮೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಮ್ಮ ವಿಮಾ ಕವಚವು ಎದುರಾಗುವ ಸಂಕಷ್ಟದಿಂದ ನಮ್ಮನ್ನು ರಕ್ಷಿಸುತ್ತದೆ. ನಿಮ್ಮ ಬಳಿ ʻಜಿಎಂಸಿ’ ವಿಮೆ (ಗ್ರೂಪ್‌ ಮೆಡಿಕಲ್‌ ಕವರ್‌) ಇದ್ದರೆ ಸಾಕೇ. ಯಾರೊಬ್ಬರ ಅವಲಂಬನೆ ಬೇಡವೆ. ಏನು ಮಾಡುವುದು. ವೈಯಕ್ತಿಕ ವಿಮೆಯನ್ನು ಖರೀದಿಸಲೇ. ಸೂಪರ್‌ ಟಾಪ್‌ ಅಪ್‌ ಅನ್ನು ಹೊಂದುವ ಮೂಲಕ ವಿಮೆ ವ್ಯಾಪ್ತಿಯನ್ನು ಹೆಚ್ಚಿಸಬೇಕೆ. ಇಂತಹ ಪ್ರಶ್ನೆಗಳನ್ನು ನಿಮ್ಮಲ್ಲಿ ಕೇಳಿಕೊಂಡರೆ ನಿಮಗೇನು ಬೇಕು ಎಂಬುದು ನಿಮಗೇ ಗೊತ್ತಾಗುತ್ತದೆ. ಈ ಆಲೋಚನೆಯು ನಿಮಗೆ ಹೊಂದುವಂತಹ ಟಾಪ್‌ ಅಪ್‌ ನೀತಿಯನ್ನು ಆಯ್ಕೆ ಮಾಡಲು ಸಹಕರಿಸುತ್ತದೆ. ಆಗಲೂ ನಿಮ್ಮಲ್ಲಿ ಇನ್ನೂ ದ್ವಂದ್ವ ಅನುಮಾನಗಳು ಇದ್ದಲ್ಲಿ ವಿಮಾ ಕಂಪೆನಿಯನ್ನು ಸಂಪರ್ಕಿಸಬಹುದು. ಅವರು ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಸರಿಹೊಂದುವ ಆರೋಗ್ಯ ವಿಮೆಯನ್ನು ಸೂಚಿಸುತ್ತಾರೆ.

ಹಿನ್ನೆಲೆಯ ಪರಿಶೀಲನೆ

ವಿಮೆಯನ್ನು ಪಡೆದುಕೊಳ್ಳುವ ಮುಂಚೆ ವಿಮಾ ಕಂಪನಿಯ ಹಿನ್ನೆಲೆಯನ್ನು ಪರಿಶೀಲಿಸಿರಬೇಕು. ಕಂಪನಿಯ ಕೊಡುಗೆಗಳು ಮತ್ತು ಅದು ಹೊಂದಿರುವ ಆಸ್ಪತ್ರೆ ಜಾಲವು ಕಂಪನಿಯ ಹಿನ್ನೆಲೆಯನ್ನು ಅರ್ಥೈಸುತ್ತದೆ. ವಿವಿಧ ಕಂಪನಿಗಳು, ಅವುಗಳ ಕೊಡುಗೆಗಳು, ಸೇವೆ, ಮಾರುಕಟ್ಟೆಯ ಸ್ಥಿತಿ ಮತ್ತು ಅವು ಹೊಂದಿರುವ ನೀತಿಗಳ ಬಗ್ಗೆ ವಿಸ್ತೃತವಾಗಿ ಮಾಹಿತಿ ಪಡೆಯಬೇಕು. ಆರೋಗ್ಯ ವಿಮೆಯನ್ನು ಹೊಂದುವಾಗ ದರವನ್ನು ಮಾತ್ರವೇ ಪ್ರಧಾನ ವಿಷಯವಾಗಿ ಪರಿಗಣಿಸಬಾರದು.

ನಿಯಮಾವಳಿ ಮತ್ತು ಷರತ್ತು ತಿಳಿದುಕೊಳ್ಳಿ

ಆರೋಗ್ಯ ವಿಮಾ ನೀತಿ ಕೆಲವು ರೀತಿ ಮತ್ತು ರಿವಾಜುಗಳನ್ನು ಹೊಂದಿರುತ್ತವೆ. ಯಾವುದನ್ನು ಒಳಗೊಳ್ಳುತ್ತದೆ, ಯಾವೆಲ್ಲವೂ ಒಳಗೊಳ್ಳುವುದಿಲ್ಲ ಎಂಬುದನ್ನು ವಿವರವಾಗಿ ಹೇಳಿರುತ್ತವೆ. ಈ ನಿಯಮಾವಳಿಗಳಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ, ಕಾಲಾವಧಿ, ಆಸ್ಪತ್ರೆ ಕೊಠಡಿಗಳ ಬಾಡಿಗೆ ವ್ಯಾಪ್ತಿ, ಅಸ್ತಿತ್ವದಲ್ಲಿರುವ ಕಾಯಿಲೆಗಳು.. ಇತ್ಯಾದಿ. ಹೀಗೆ ಎಲ್ಲ ಷರತ್ತು- ಮಿತಿಗಳನ್ನು ಜಾಲಾಡಬೇಕು. ಇವೆಲ್ಲವೂ ಒಪ್ಪಿತವಾದರೆ ಮಾತ್ರ ವಿಮೆ ಯೋಜನೆ ಪಡೆದುಕೊಳ್ಳಬೇಕು. ವಿಮೆಯನ್ನು ಹೊಂದುವಾಗ ನಿಯಮಾವಳಿಗಳ ಬಗ್ಗೆ ತಿಳಿದಿಲ್ಲವಾದಲ್ಲಿ ನಿಮಗೇ ಕಷ್ಟವಾಗುತ್ತದೆ. ನಿಮ್ಮ ಅಗತ್ಯ ವಿಷಯಗಳನ್ನು ಒಳಗೊಳ್ಳದೇ ಇರುವ ಅಂಶಗಳನ್ನಾದರೂ ಗಮನಿಸಬೇಕಾಗುತ್ತದೆ.

ಸಿಗುವ ಕೆಲವು ಪ್ರಯೋಜನಗಳು

ಉಚಿತ ಆರೋಗ್ಯ ತಪಾಸಣೆ: ಕೆಲವು ವಿಮಾದಾರರು ವರ್ಷದ ಕೊನೆಯಲ್ಲಿ ಉಚಿತ ತಪಾಸಣೆಯನ್ನು ಆಯೋಜಿಸುತ್ತಾರೆ. ಇದು ನಿಮ್ಮ ಆರೋಗ್ಯದ ಮೇಲೆ ನಿಗಾ ಇಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ನಮ್ಮ ಆರೋಗ್ಯ ವ್ಯಾಪ್ತಿಯನ್ನು ಅಂದಾಜಿಸಲು ಸಹಕರಿಸುತ್ತದೆ.

ಬೋನಸ್‌: ಹಿಂದಿನ ಅವಧಿಯ ವಿಮೆಯನ್ನು ಪಡೆದುಕೊಳ್ಳಲು ಹಕ್ಕು ಮಂಡಿಸದಿದ್ದರೆ ವಿಮಾ ನವೀಕರಣ ಮಾಡುವಾಗ ಬೋನಸ್‌ ನೀಡುತ್ತಾರೆ. ಈ ವಿವರಗಳ ಕುರಿತು ವಿಮಾ ಪತ್ರದಲ್ಲಿಯೇ ತಿಳಿಸಿರುತ್ತಾರೆ. ಕೆಲವು ವಿಮಾ ಕಂಪನಿಗಳಂತೂ ಬೋನಸ್‌ ಅನ್ನು ಹೆಚ್ಚಿಸುವ ಅಥವಾ ಪ್ರೀಮಿಯಂ ಹಣವನ್ನು ಕಡಿಮೆಗೊಳಿಸುವ ಕೊಡುಗೆಗಳನ್ನು ಗ್ರಾಹಕರಿಗೆ ನೀಡಿರುತ್ತವೆ.

ಕಾಯಿಲೆಗಳಿಗೆ ರಕ್ಷಣೆ: ವಿಮೆ ಮಾಡಿಸುವ ಮುಂಚೆಯೇ ಅಸ್ತಿತ್ವದಲ್ಲಿದ್ದ ಕಾಯಿಲೆಗಳಿಗೂ ರಕ್ಷಣೆಯ ಅಭಯವನ್ನು ವಿಮಾ ಕಂಪನಿಗಳು ನೀಡಿರುತ್ತವೆ. ಈ ಕಾಯಿಲೆಗಳ ಕುರಿತು ವಿಮಾದಾರರ ಘೋಷಣೆಯ ಆಧಾರದ ಮೇಲೆ ಸಂಬಂಧಿಸಿದ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುತ್ತದೆ. ಇದರ ವ್ಯಾಪ್ತಿಯನ್ನೂ ನಿರ್ಧರಿಸಲಾಗಿರುತ್ತದೆ.

ಆರೋಗ್ಯ ಸಂಬಂಧಿತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆಯೇ ಸಂಕಷ್ಟ ಸಮಯದಲ್ಲಿ ಪರಿಹಾರೋಪಾಯ ಮಾರ್ಗಗಳನ್ನು ಈಗಾಗಲೇ ಗುರುತು ಮಾಡಿ ಇಟ್ಟುಕೊಂಡಿರಬಹುದು. ಆದರೆ, ಆರೋಗ್ಯ ವಿಮೆ ನೀಡುವ ಬೆಂಬಲ ಮತ್ತು ಕಾಳಜಿ ಇನ್ನಾವುದೇ ಪರಿಹಾರೋಪಾಯ ಭರಿಸಲಾಗುವುದಿಲ್ಲ. ವಿಮೆಯನ್ನು ಪಡೆಯುವಾಗ ಸಲಹೆ ಪಡೆದು ಉತ್ತಮವಾದುದನ್ನೇ ಆಯ್ದುಕೊಳ್ಳಬೇಕು. ಏಕೆಂದರೆ ಆರೋಗ್ಯವು ಅಪಾಯಕ್ಕೆ ಸಿಲುಕಿದಾಗ ನೆರವಾಗುವುದು ವಿಮೆಯೇ ಆಗಿರುತ್ತದೆ.

(ಲೇಖಕ: ಬಜಾಜ್ ಅಲಯನ್ಸ್‌ ಇನ್ಶುರೆನ್ಸ್‌ ರಿಟೇಲ್ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.