ADVERTISEMENT

ರಿಲಯನ್ಸ್‌: ಹೊಸ ಡಿಜಿಟಲ್‌ ಕಂಪನಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 20:08 IST
Last Updated 28 ಅಕ್ಟೋಬರ್ 2019, 20:08 IST
ಮುಕೇಶ್‌ ಅಂಬಾನಿ
ಮುಕೇಶ್‌ ಅಂಬಾನಿ   

ನವದೆಹಲಿ (ಪಿಟಿಐ): ದೇಶದ ಅತ್ಯಂತ ಸಿರಿವಂತ ಉದ್ಯಮಿ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌), ತನ್ನೆಲ್ಲ ಡಿಜಿಟಲ್‌ ವಿಭಾಗಗಳನ್ನು ಒಂದುಗೂಡಿಸಿ ಹೊಸ ಅಂಗಸಂಸ್ಥೆ ಸ್ಥಾಪಿಸಲು ಮುಂದಾಗಿದೆ.

ಡಿಜಿಟಲ್‌ ಕ್ಷೇತ್ರದಲ್ಲಿ ತೊಡಗಿರುವ ‘ಆರ್‌ಐಎಲ್‌’ನ ಎಲ್ಲ ಅಂಗಸಂಸ್ಥೆಗಳು ಈ ಹೊಸ ಸಂಸ್ಥೆಯಡಿ ಕಾರ್ಯನಿರ್ವಹಿಸಲಿವೆ ಎಂದು ಕಂಪನಿಯು ಕಳೆದ ವಾರ ಪ್ರಕಟಿಸಿದೆ. ಇದು ದೇಶದ ಇ–ಕಾಮರ್ಸ್‌ನ ದೈತ್ಯ ಸಂಸ್ಥೆಯಾಗಿರಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ತೈಲದಿಂದ ಪೆಟ್ರೊಕೆಮಿಕಲ್ಸ್‌ ವಹಿವಾಟುವರೆಗಿನ ರಿಲಯನ್ಸ್‌ ಸಾಮ್ರಾಜ್ಯವನ್ನು ಭವಿಷ್ಯದ ದತ್ತಾಂಶ ಮತ್ತು ಡಿಜಿಟಲ್‌ ಸೇವೆಗಳಿಗೂ ವಿಸ್ತರಿಸುವ ಆಲೋಚನೆ ಇದಾಗಿದೆ.

ADVERTISEMENT

ಈ ಹೊಸ ಕಂಪನಿಯಲ್ಲಿ ₹ 1.08 ಲಕ್ಷ ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ. ರಿಲಯನ್ಸ್‌ ಜಿಯೊದ ಸಾಲವನ್ನು ಮೂಲ ಕಂಪನಿಗೆ ವರ್ಗಾಯಿಸುವುದರಿಂದ ಹೊಸ ಬಂಡವಾಳ ಹೂಡಿಕೆದಾರರನ್ನು ಸೆಳೆಯುವುದೂ ಸುಲಭವಾಗಿರಲಿದೆ. ಹೊಸ ಕಂಪನಿಗಾಗಿ ಆರಂಭಿಕ ಸಾರ್ವಜನಿಕ ನೀಡಿಕೆ (ಐಪಿಒ) ಮೂಲಕ ಬಂಡವಾಳ ಸಂಗ್ರಹಿಸುವುದೂ ಮುಕೇಶ್‌ ಅವರ ಚಿಂತನೆಯಾಗಿದೆ.

ಕಂಪನಿಯು ತನ್ನ ದೂರಸಂಪರ್ಕ ಮತ್ತು ಡಿಜಿಟಲ್‌ ವಹಿವಾಟಿನ ಪುನರ್‌ರಚನೆಗೆ ಮುಂದಾಗಿರುವುದು, ಸಂಪತ್ತಿನ ನಗದೀಕರಣ ಮತ್ತು ಸಾಲದ ಪ್ರಮಾಣ ತಗ್ಗಿಸುವ ಉದ್ದೇಶವಾಗಿದೆ ಎಂದು ಅಮೆರಿಕದ ಹಣಕಾಸು ಸೇವಾ ಸಂಸ್ಥೆ ಮೋರ್ಗನ್‌ ಸ್ಟ್ಯಾನ್ಲಿ ವಿಶ್ಲೇಷಿಸಿದೆ.

ಹೊಸ ಕಂಪನಿಯು ಭಾರತದಲ್ಲಿನ ಅತಿದೊಡ್ಡ ಡಿಜಿಟಲ್‌ ಸೇವಾ ಸಂಸ್ಥೆಯಾಗಿರಲಿದೆ. ಇದು ಆರೋಗ್ಯ ರಕ್ಷಣೆ, ಶಿಕ್ಷಣ ಕ್ಷೇತ್ರದಲ್ಲಿನ ತಂತ್ರಜ್ಞಾನದ ಜತೆಗೆ ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೇನ್‌ ಮತ್ತಿತರ ತಂತ್ರಜ್ಞಾನ ಕ್ಷೇತ್ರಗಳ ವಹಿವಾಟಿನಲ್ಲಿ ತೊಡಗಲಿದೆ.

ರಿಲಯನ್ಸ್‌ನ ಮೈ ಜಿಯೊ, ಜಿಯೊ ಟಿವಿ, ಜಿಯೊ ಸಿನಿಮಾ, ಜಿಯೊ ನ್ಯೂಸ್‌ ಮತ್ತು ಜಿಯೊಸಾವನ್‌ಗಳನ್ನೂ ಹೊಸ ಕಂಪನಿಯ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. 2020ರ ವೇಳೆಗೆ ರಿಲಯನ್ಸ್‌ ಜಿಯೊ ಸಂಸ್ಥೆಯನ್ನು ಅದರ ತರಂಗಾಂತರ ಹೊಣೆಗಾರಿಕೆ ಹೊರತುಪಡಿಸಿ ಸಾಲ ಮುಕ್ತ ಸಂಸ್ಥೆಯನ್ನಾಗಿ ಮಾಡುವ ಆಲೋಚನೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.