ADVERTISEMENT

ಆರ್‌ಟಿಜಿಎಸ್‌ ಸೇವೆ: ಡಿ. 14ರಿಂದ ಬಿಡುವಿಲ್ಲದೆ ಲಭ್ಯ

ಪಿಟಿಐ
Published 9 ಡಿಸೆಂಬರ್ 2020, 15:38 IST
Last Updated 9 ಡಿಸೆಂಬರ್ 2020, 15:38 IST

ಮುಂಬೈ: ಹೆಚ್ಚಿನ ಮೊತ್ತದ ಹಣ ವರ್ಗಾವಣೆಗೆ ಬಳಸುವ ಆರ್‌ಟಿಜಿಎಸ್‌ ಸೌಲಭ್ಯವು ಡಿಸೆಂಬರ್‌ 14ರಿಂದ ದಿನದ 24 ಗಂಟೆಗಳ ಕಾಲವೂ ಲಭ್ಯವಾಗಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿದೆ. ಈ ಮೂಲಕ ಆರ್‌ಟಿಜಿಎಸ್‌ ಸೌಲಭ್ಯವನ್ನು ಬಿಡುವೇ ಇಲ್ಲದೆ ನೀಡುವ ದೇಶಗಳ ಸಾಲಿಗೆ ಭಾರತವೂ ಸೇರಲಿದೆ.

ಆರ್‌ಟಿಜಿಎಸ್‌ ಸೌಲಭ್ಯವು ವರ್ಷದ ಅಷ್ಟೂ ದಿನ, 24 ಗಂಟೆಗಳೂ ಲಭ್ಯವಿರುವ ವ್ಯವಸ್ಥೆ ಬರಲಿದೆ ಎಂದು ಆರ್‌ಬಿಐ ಅಕ್ಟೋಬರ್‌ನಲ್ಲಿ ಪ್ರಕಟಿಸಿತ್ತು. ‘ಇದರ ಅನ್ವಯ, ಹೊಸ ವ್ಯವಸ್ಥೆಗೆ ಡಿಸೆಂಬರ್‌ 14ರ ನಡುರಾತ್ರಿ 12.30ಕ್ಕೆ ಚಾಲನೆ ನೀಡಲಾಗುವುದು’ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ.

ಸಣ್ಣ ಮೊತ್ತದ ಹಣ ವರ್ಗಾವಣೆ ಬಳಸುವ ಎನ್‌ಇಎಫ್‌ಟಿ ಸೌಲಭ್ಯವು 24 ಗಂಟೆಗಳೂ ಲಭ್ಯವಿರುವಂತೆ ಮಾಡಿದ ಒಂದು ವರ್ಷಕ್ಕೂ ಮೊದಲೇ ಆರ್‌ಟಿಜಿಎಸ್‌ ಸೌಲಭ್ಯ ಕೂಡ 24 ಗಂಟೆಗಳೂ ಲಭ್ಯವಿರುವಂತೆ ಆಗಲಿದೆ. ಈಗ ಒಟ್ಟು 237 ಬ್ಯಾಂಕ್‌ಗಳು ದೇಶದಲ್ಲಿ ಆರ್‌ಟಿಜಿಎಸ್‌ ಸೌಲಭ್ಯ ನೀಡುತ್ತಿವೆ. ಪ್ರತಿನಿತ್ಯ 6.35 ಲಕ್ಷ ಆರ್‌ಟಿಜಿಎಸ್‌ ವಹಿವಾಟುಗಳು ನಡೆಯುತ್ತವೆ.

ADVERTISEMENT

₹ 2 ಲಕ್ಷದವರೆಗಿನ ಹಣ ವರ್ಗಾವಣೆಗೆ ಎನ್‌ಇಎಫ್‌ಟಿ ಬಳಸಲಾಗುತ್ತಿದೆ. ಹೆಚ್ಚಿನ ಮೊತ್ತದ ಹಣ ವರ್ಗಾವಣೆ ಆಗಬೇಕಿದ್ದರೆ ಆರ್‌ಟಿಜಿಎಸ್‌ ಸೌಲಭ್ಯವನ್ನು ಬಳಕೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.