ನವದೆಹಲಿ (ಪಿಟಿಐ): ಮನೆಗಳಲ್ಲಿ ಬಳಸುವ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ₹200ರಷ್ಟು ತಗ್ಗಿಸಿರುವುದಕ್ಕೆ ಪ್ರತಿಯಾಗಿ, ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಕಂಪನಿಗಳಿಗೆ ಕೇಂದ್ರದ ಕಡೆಯಿಂದ ಪರಿಹಾರ ಧನ ಸಿಗುವ ಸಾಧ್ಯತೆ ಇಲ್ಲ ಎಂದು ಮೂಲಗಳು ಹೇಳಿವೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳಲ್ಲಿ ಸಿಕ್ಕ ಭಾರಿ ವರಮಾನ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ದರವು ಗರಿಷ್ಠ ಮಟ್ಟದಿಂದ ಕೆಳಕ್ಕೆ ಬಂದಿರುವುದು ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಕಂಪನಿಗಳಿಗೆ ಈಗಿನ ದರ ಇಳಿಕೆಯ ಹೊರೆಯನ್ನು ಹೊತ್ತುಕೊಳ್ಳಲು ನೆರವಾಗಲಿವೆ ಎಂದು ಮೂಲಗಳು ವಿವರಿಸಿವೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್) ಮತ್ತು ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್‌ಪಿಸಿಎಲ್) ಜೂನ್ ತ್ರೈಮಾಸಿಕದಲ್ಲಿ ಭಾರಿ ವರಮಾನ ದಾಖಲಿಸಿವೆ. ಜೂನ್ ನಂತರದಲ್ಲಿಯೂ ವರಮಾನ ಸಂಗ್ರಹವು ಹೆಚ್ಚಿನ ಮಟ್ಟದಲ್ಲಿ ಇದೆ ಎಂದು ಉದ್ಯಮದ ಮೂಲಗಳು ಹೇಳಿವೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೌದಿ ಸಿಪಿ (ಎಲ್‌ಪಿಜಿ ದರ ನಿಗದಿಗೆ ಆಧಾರವಾಗಿರುವ ದರ) ಮಾರ್ಚ್‌ನಲ್ಲಿ ಟನ್‌ಗೆ 732 ಡಾಲರ್ ಇದ್ದಿದ್ದು ಜುಲೈನಲ್ಲಿ ಟನ್‌ಗೆ 385 ಡಾಲರ್‌ಗೆ ಇಳಿದಿದೆ. ದರವು ಆಗಸ್ಟ್‌ನಲ್ಲಿ 464 ಡಾಲರ್‌ಗೆ ಏರಿಕೆಯಾಗಿದ್ದರೂ, ಎಲ್‌ಪಿಜಿ ದರ ತಗ್ಗಿಸಲು ಅವಕಾಶ ಇದೆ ಎಂದು ಮೂಲವೊಂದು ಹೇಳಿದೆ.
ತೈಲ ಸಚಿವ ಹರದೀಪ್ ಸಿಂಗ್ ಪುರಿ ಅವರು ಬುಧವಾರ ಸಂದರ್ಶನವೊಂದರಲ್ಲಿ, ತೈಲೋತ್ಪನ್ನ ಮಾರಾಟ ಕಂಪನಿಗಳು ‘ಒಳ್ಳೆಯ ಕಾರ್ಪೊರೇಟ್ ಪ್ರಜೆಗಳಾಗಿ’ ದರ ಇಳಿಕೆ ಮಾಡಿವೆ ಎಂದು ಹೇಳಿದ್ದಾರೆ. ಬೆಲೆ ಇಳಿಕೆ ನಿರ್ಧಾರಕ್ಕೆ ಪೂರಕವಾಗಿ ಸರ್ಕಾರದ ಕಡೆಯಿಂದ ಸಬ್ಸಿಡಿಯ ನೆರವು ಸಿಗಲಿದೆಯೇ ಎಂಬ ಪ್ರಶ್ನೆಗೆ ಅವರು ನೇರ ಉತ್ತರ ನೀಡಿಲ್ಲ.
ಬೆಲೆ ಇಳಿಕೆಯ ಹೊರೆಯನ್ನು ಕಂಪನಿಗಳೇ ಹೊರಬೇಕು ಎಂದು ಮೂಲಗಳು ಹೇಳಿವೆ. ಸೌದಿ ಸಿಪಿ ಬೆಲೆಯು ಮಾರ್ಚ್, ಏಪ್ರಿಲ್‌ನಲ್ಲಿ ಹೆಚ್ಚಾಗಿದ್ದಾಗ ಮೂರೂ ಕಂಪನಿಗಳು ನಷ್ಟ ಅನುಭವಿಸಿದ್ದವು. ಆ ನಷ್ಟವನ್ನು ಸರಿದೂಗಿಸಿಕೊಳ್ಳಲು ಇನ್ನೂ ಆಗಿಲ್ಲ ಎನ್ನಲಾಗಿದೆ.
ಕೇಂದ್ರವು 2022ರ ಅಕ್ಟೋಬರ್‌ನಲ್ಲಿ ತೈಲೋತ್ಪನ್ನ ಕಂಪನಿಗಳಿಗೆ ಎಲ್‌ಪಿಜಿಯನ್ನು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಗೆ ಮಾರಾಟ ಮಾಡಿದ್ದಕ್ಕಾಗಿ ₹22 ಸಾವಿರ ಕೋಟಿ ನೆರವು ಒದಗಿಸಿತ್ತು. ಆದರೆ ಈ ಬಾರಿ ಅಂತಹ ನೆರವು ಇರುವುದಿಲ್ಲ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.