ADVERTISEMENT

ಕಳೆದ ಹಣಕಾಸು ವರ್ಷದಲ್ಲಿ ₹2,000 ಮುಖಬೆಲೆಯ ನೋಟು ಮುದ್ರಿಸಿಲ್ಲ: ಆರ್‌ಬಿಐ

ಪಿಟಿಐ
Published 25 ಆಗಸ್ಟ್ 2020, 10:40 IST
Last Updated 25 ಆಗಸ್ಟ್ 2020, 10:40 IST
₹ 2000 ಮುಖಬೆಲೆಯ ನೋಟುಗಳು (ಸಂಗ್ರಹ ಚಿತ್ರ)
₹ 2000 ಮುಖಬೆಲೆಯ ನೋಟುಗಳು (ಸಂಗ್ರಹ ಚಿತ್ರ)   

ಮುಂಬೈ: ಕಳೆದ ಹಣಕಾಸು ವರ್ಷದಲ್ಲಿ (2019-20) ₹2,000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸಿಲ್ಲ. ಅದೇವರ್ಷದಲ್ಲಿ ನೋಟುಗಳ ಚಲಾವಣೆ ಕೂಡ ಕಡಿಮೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಂಗಳವಾರ ತಿಳಿಸಿದೆ.

₹ 2,000 ಮುಖಬೆಲೆಯ ನೋಟುಗಳ ಬಳಕೆಯ ಸಂಖ್ಯೆ 2018ರಿಂದ ಕ್ರಮೇಣ ಕಡಿಮೆಯಾಗಿದೆ. 2018ರ ಮಾರ್ಚ್ ಅಂತ್ಯದ ವೇಳೆಗೆ 33,632 ಲಕ್ಷ ನೋಟುಗಳು ಚಲಾವಣೆಯಲ್ಲಿದ್ದವು, 2019ರ ಮಾರ್ಚ್ ಅಂತ್ಯದ ವೇಳೆಗೆ ಈ ಸಂಖ್ಯೆ 32,910 ಲಕ್ಷ ನೋಟುಗಳಿಗೆ ಇಳಿದಿತ್ತು. 2020ರ ಮಾರ್ಚ್ ಅಂತ್ಯದ ವೇಳೆಗೆ ಇದು ಮತ್ತಷ್ಟು ಕಡಿಮೆಯಾಗಿ 27,398 ಲಕ್ಷಕ್ಕೆ ಇಳಿದೆದೆ ಎಂದು ಆರ್‌ಬಿಐ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

2020ರ ಮಾರ್ಚ್ ಅಂತ್ಯದ ವೇಳೆಗೆ ಚಲಾವಣೆಯಲ್ಲಿದ್ದ ಒಟ್ಟು ನೋಟುಗಳ ಪ್ರಮಾಣದಲ್ಲಿ₹2,000 ಮುಖಬೆಲೆಯ ನೋಟುಗಳ ಪಾಲುಶೇ 2.4 ರಷ್ಟಿತ್ತು. ಕಳೆದ ವರ್ಷ ಅಂದರೆ, 2019ರ ಮಾರ್ಚ್ ಅಂತ್ಯದ ವೇಳೆಗೆ ಶೇ 3 ಮತ್ತು 2018ರ ಮಾರ್ಚ್ ಅಂತ್ಯದ ವೇಳೆಗೆ 3.3 ರಷ್ಟಿತ್ತು.

ADVERTISEMENT

ಮೌಲ್ಯದ ದೃಷ್ಟಿಯಿಂದಲೂ, ಇದರ ಪಾಲು 2020 ರ ಮಾರ್ಚ್ ಅಂತ್ಯದ ವೇಳೆಗೆ ಶೇ 22.6 ಕ್ಕೆ ಕುಸಿದಿದೆ. 2019 ರ ಮಾರ್ಚ್ ಅಂತ್ಯದ ವೇಳೆಗೆ ಚಲಾವಣೆಯಲ್ಲಿರುವ ನಗದಿನಲ್ಲಿ₹ 2,000 ಮುಖಬೆಲೆಯ ನೋಟುಗಳು ಶೇ 31.2ರಷ್ಟಿತ್ತು. 2018ರ ಮಾರ್ಚ್ ಅಂತ್ಯದ ವೇಳೆಯಲ್ಲಿ ಇದುಶೇ 37.3 ರಷ್ಟು ಇತ್ತು.

ಆರ್‌ಬಿಐ ವರದಿಯ ಮತ್ತೊಂದು ಗಮನೀಯ ಅಂಶವೆಂದರೆ₹500 ಮತ್ತು₹200 ಮುಖಬೆಲೆಯ ನೋಟುಗಳಿಗೆ ಸಂಬಂಧಿಸಿದ್ದು. ಈ ಎರಡೂ ನೋಟುಗಳ ಚಲಾವಣೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

2019-20ರ ಅವಧಿಯಲ್ಲಿ ₹ 2,000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸಲು ಯಾವುದೇ ಬೇಡಿಕೆ ಬಂದಿಲ್ಲ. ಬಿಆರ್‌ಬಿಎನ್‌ಎಂಪಿಎಲ್ (ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ಪ್ರೈವೇಟ್ ಲಿಮಿಟೆಡ್) ಮತ್ತು ಎಸ್‌ಪಿಎಂಸಿಐಎಲ್‌ನಿಂದ (ಸೆಕ್ಯುರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್) ಹೊಸದಾಗಿ ಯಾವುದೇ ಸರಬರಾಜು ಮಾಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

'2019-20ರ ನೋಟುಗಳ ಬೇಡಿಕೆ ಪ್ರಮಾಣವೂ ಒಂದು ವರ್ಷದ ಹಿಂದಿನ ಪ್ರಮಾಣಕ್ಕಿಂತಲೂ ಶೇ 13.1 ರಷ್ಟು ಕಡಿಮೆಯಾಗಿತ್ತು. 2018-29ಕ್ಕೆ ಹೋಲಿಸಿದರೆ, 2019-20ರ ಅವಧಿಯಲ್ಲಿ ನೋಟುಗಳ ಪೂರೈಕೆಯು ಶೇ 23.3ರಷ್ಟು ಕಡಿಮೆಯಾಗಿದೆ. ಮುಖ್ಯವಾಗಿ ಕೋವಿಡ್-19ನಿಂದಾಗಿ ಉಂಟಾದ ಪರಿಸ್ಥಿತಿ ಮತ್ತು ನಂತರದ ಲಾಕ್‌ಡೌನ್‌ ಇದಕ್ಕೆ ಕಾರಣ' ಎಂದು ಅದು ಹೇಳಿದೆ.

₹ 500 ಮುಖಬೆಲೆಯ 1,463 ಕೋಟಿ ನೋಟುಗಳನ್ನು ಮುದ್ರಿಸಲು ಇಂಡೆಂಟ್ ನೀಡಲಾಗಿದೆ ಮತ್ತು 2019-20ರ ಅವಧಿಯಲ್ಲಿ 1,200 ಕೋಟಿ ನೋಟುಗಳನ್ನು ಸರಬರಾಜು ಮಾಡಲಾಗಿದೆ. 2018-19ರಲ್ಲೂ 1,169 ಕೋಟಿ ನೋಟುಗಳಿಗೆ ಇಂಡೆಂಟ್ ನೀಡಲಾಗಿತ್ತು.1,147 ಕೋಟಿ ನೋಟುಗಳ ಪೂರೈಕೆ ಮಾಡಲಾಗಿತ್ತು.

2019-20ರ ಅವಧಿಯಲ್ಲಿ ₹ 100 (330 ಕೋಟಿ ನೋಟುಗಳು), ₹ 50 (240 ಕೋಟಿ), ₹ 200 (205 ಕೋಟಿ), ₹ 10 (147 ಕೋಟಿ) ಮತ್ತು ₹ 20ರ ಮುಖಬೆಲೆಯ (125 ಕೋಟಿ) ಕರೆನ್ಸಿ ನೋಟುಗಳನ್ನು ಮುದ್ರಿಸಲು ಬಿಆರ್‌ಬಿಎನ್‌ಎಂಪಿಎಲ್ ಮತ್ತು ಎಸ್‌ಪಿಎಂಸಿಐಎಲ್‌ಗೆ ಆದೇಶ ನೀಡಲಾಯಿತು. ಅವುಗಳಲ್ಲಿ ಹೆಚ್ಚಿನ ಸಂಖ್ಯೆಯನ್ನು ಚಲಾವಣೆಗಾಗಿ ಅದೇ ಹಣಕಾಸು ವರ್ಷದಲ್ಲಿಯೇ ಸರಬರಾಜು ಮಾಡಲಾಯಿತು.

2019-20ರ ಅವಧಿಯಲ್ಲಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪತ್ತೆಯಾದ ಒಟ್ಟು ಭಾರತೀಯ ಕರೆನ್ಸಿ ನಕಲಿ ನೋಟುಗಳಲ್ಲಿ ಶೇ 4.6 ರಷ್ಟು ರಿಸರ್ವ್ ಬ್ಯಾಂಕಿನಲ್ಲಿ ಮತ್ತು ಶೇ 95.4 ಇತರ ಬ್ಯಾಂಕುಗಳಿಂದ ಪತ್ತೆಯಾಗಿದೆ. ಒಟ್ಟು 2,96,695 ನಕಲಿ ನೋಟುಗಳು ಪತ್ತೆಯಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.