ADVERTISEMENT

₹ 83ಕ್ಕೆ ಕುಸಿದ ರೂಪಾಯಿ ಮೌಲ್ಯ

ಪಿಟಿಐ
Published 19 ಅಕ್ಟೋಬರ್ 2022, 16:35 IST
Last Updated 19 ಅಕ್ಟೋಬರ್ 2022, 16:35 IST
   

ಮುಂಬೈ (ಪಿಟಿಐ): ರೂಪಾಯಿಯ ಮೌಲ್ಯವು ಅಮೆರಿಕದ ಡಾಲರ್ ಎದುರು ಇದೇ ಮೊದಲ ಬಾರಿಗೆ ₹ 83ರ ಮಟ್ಟಕ್ಕೆ ಕುಸಿದಿದೆ. ಬುಧವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು ಡಾಲರ್ ಎದುರು 60 ಪೈಸೆಯಷ್ಟು ಕುಸಿದಿದೆ.

ವಿದೇಶಿ ಬಂಡವಾಳದ ಹೊರಹರಿವು, ಡಾಲರ್‌ ಮೌಲ್ಯವರ್ಧನೆ ಹಾಗೂ ಕಚ್ಚಾ ತೈಲ ಬೆಲೆ ಮತ್ತೆ ಹೆಚ್ಚಾಗುತ್ತಿರುವುದು, ಹೂಡಿಕೆದಾರರು ಹೆಚ್ಚು ರಿಸ್ಕ್‌ ತೆಗೆದುಕೊಳ್ಳಲು ಮನಸ್ಸು ಮಾಡುತ್ತಿಲ್ಲದಿರುವುದು ರೂಪಾಯಿ ಮೌಲ್ಯ ಇಳಿಕೆಗೆ ಕಾರಣ ಎಂದು ತಜ್ಞರು ಹೇಳಿದ್ದಾರೆ.

ಡಾಲರ್ ಮೌಲ್ಯವು ಜಪಾನ್‌ನ ಯೆನ್ ಎದುರು 32 ವರ್ಷಗಳ ಗರಿಷ್ಠ ಮಟ್ಟ ತಲುಪಿದೆ. ಯೂರೊ ಮತ್ತು ಬ್ರಿಟಿಷ್ ಪೌಂಡ್ ಮೌಲ್ಯ ಕೂಡ ಇಳಿಕೆಯಾಗಿದೆ.

ADVERTISEMENT

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು ಡಾಲರ್ ಎದುರು ಒಂದು ಹಂತದಲ್ಲಿ ₹ 83.01ರವರೆಗೆ ಇಳಿಕೆಯಾಗಿತ್ತು. ವಹಿವಾಟಿನ ಅಂತ್ಯದ ಹೊತ್ತಿಗೆ ₹ 83ಕ್ಕೆ ತಲುಪಿತು. ಅಕ್ಟೋಬರ್‌ನಲ್ಲಿ ರೂಪಾಯಿ ಇದುವರೆಗೆ 160 ಪೈಸೆಯಷ್ಟು ಮೌಲ್ಯ ಕಳೆದುಕೊಂಡಿದೆ.

ಬುಧವಾರದ ವಹಿವಾಟಿನಲ್ಲಿ ದೇಶದ ಷೇರುಪೇಟೆಗಳಲ್ಲಿ ತುಸು ಏರಿಕೆ ದಾಖಲಾಗಿದೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 146 ಅಂಶ ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 25 ಅಂಶ ಏರಿಕೆ ದಾಖಲಿಸಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಒಟ್ಟು ₹ 453 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.