ADVERTISEMENT

ದಾಖಲೆಯ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

ಪಿಟಿಐ
Published 10 ಮೇ 2022, 2:37 IST
Last Updated 10 ಮೇ 2022, 2:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮುಂಬೈ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಸೋಮವಾರದ ವಹಿವಾಟಿನಲ್ಲಿ 54 ಪೈಸೆ ಕುಸಿದ ರೂಪಾಯಿ ಮೌಲ್ಯವು, ಒಂದು ಡಾಲರ್‌ಗೆ 77.44ರಂತೆ ವಿನಿಮಯ ಆಗಿದೆ. ಅಮೆರಿಕದ ಡಾಲರ್ ಬಲಗೊಳ್ಳುತ್ತಿರುವುದು ಹಾಗೂ ದೇಶದ ಬಂಡವಾಳ ಮಾರುಕಟ್ಟೆಗಳಿಂದ ವಿದೇಶಿ ಬಂಡವಾಳ ಹೊರಹೋಗುತ್ತಿರುವುದು ರೂಪಾಯಿ ಮೌಲ್ಯ ಇಳಿಕೆಗೆ ಮುಖ್ಯ ಕಾರಣಗಳು.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ಅಮೆರಿಕದ ಡಾಲರ್ ಎದುರು ರೂಪಾಯಿಯು ವಹಿವಾಟಿನ ಒಂದು ಹಂತದಲ್ಲಿ 77.52ರ ಮಟ್ಟವನ್ನು ಕೂಡ ತಲುಪಿತ್ತು. ಶುಕ್ರವಾರದ ವಹಿವಾಟಿನಲ್ಲಿ ರೂಪಾಯಿಯು ಅಮೆರಿಕದ ಡಾಲರ್ ಎದುರು 55 ಪೈಸೆ ದುರ್ಬಲಗೊಂಡಿತ್ತು. ಎರಡು ದಿನಗಳ ವಹಿವಾಟಿನಲ್ಲಿ ರೂಪಾಯಿಯು 109 ಪೈಸೆಯಷ್ಟು ಮೌಲ್ಯ ಕಳೆದುಕೊಂಡಿದೆ.

‘ಹಣದುಬ್ಬರವನ್ನು ನಿಯಂತ್ರಿಸಲು ಮುಂದಿನ ದಿನಗಳಲ್ಲಿ ರೆಪೊ ದರವನ್ನು ಇನ್ನಷ್ಟು ಹೆಚ್ಚಿಸಬೇಕಾದ ಅಗತ್ಯ ಎದು ರಾಗಬಹುದು ಎಂಬ ಲೆಕ್ಕಾಚಾರದಲ್ಲಿ ಹೂಡಿಕೆದಾರರು ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಕಚ್ಚಾ ತೈಲ ದರ ಹೆಚ್ಚಾಗಿರುವುದು, ದೇಶದಲ್ಲಿ ಹಣದುಬ್ಬರ ದರವು ಆರ್‌ಬಿಐ ನಿಗದಿ ಮಾಡಿರುವ ಗರಿಷ್ಠ ಮಿತಿಯನ್ನು ಕೂಡ ಮೀರಿರುವುದು ವಿದೇಶಿ ಹೂಡಿಕೆದಾರರು ದೇಶದ ಬಂಡವಾಳ ಮಾರುಕಟ್ಟೆಗಳಿಂದ ಇನ್ನಷ್ಟು ಹಣ ಹಿಂಪಡೆಯುವಂತೆ ಮಾಡಬಹುದು.

ಆರ್‌ಬಿಐ ಹಣಕಾಸು ನೀತಿ ಸಮಿತಿಯುರೂಪಾಯಿಬಲ ವರ್ಧನೆಗೆ ಹೆಚ್ಚೇನೂ ಮಾಡಿಲ್ಲ.ರೂ‍‍ಪಾಯಿಮೌಲ್ಯವು ಮುಂದಿನ ದಿನಗಳಲ್ಲಿ 77.80ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ’ ಎಂದು ಆನಂದ್ ರಾಠಿ ಬ್ರೋಕರೇಜ್ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ರಾಯ್ಸ್ ವರ್ಗೀಸ್ ಜೋಸೆಫ್ ಹೇಳಿದ್ದಾರೆ.

ಹಣದುಬ್ಬರ ಜಾಸ್ತಿ ಆಗಿರು ವುದರಿಂದ ಮತ್ತು ಕೇಂದ್ರೀಯ ಬ್ಯಾಂಕ್‌ ಗಳು ಹಣದ ಹರಿವು ತಗ್ಗಿಸಲು ಯತ್ನಿಸುತ್ತಿರುವ ಕಾರಣದಿಂದರೂಪಾಯಿಮೌಲ್ಯದ ಮೇಲೆ ಇನ್ನಷ್ಟು ಒತ್ತಡ ಸೃಷ್ಟಿಯಾಗಬಹುದು ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ ಹೇಳಿದ್ದಾರೆ.

ಸೋಮವಾರದ ವಹಿವಾಟಿನಲ್ಲಿ ವಿದೇಶಿ ಹೂಡಿಕೆದಾರರು ದೇಶದ ಬಂಡವಾಳ ಮಾರುಕಟ್ಟೆಗಳಲ್ಲಿ ಒಟ್ಟು ₹ 3,361 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.