ADVERTISEMENT

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 75 ಪೈಸೆ ಜಿಗಿತ

ಪಿಟಿಐ
Published 24 ಜೂನ್ 2025, 14:13 IST
Last Updated 24 ಜೂನ್ 2025, 14:13 IST
ರೂಪಾಯಿ
ರೂಪಾಯಿ   

ಮುಂಬೈ: ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ತೀವ್ರತೆ ಕಡಿಮೆಯಾಗುವ ಭರವಸೆ ಮೂಡಿರುವ ಪರಿಣಾಮವಾಗಿ, ಡಾಲರ್‌ ಮೌಲ್ಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕಡಿಮೆಯಾಗಿದೆ. ಇದರಿಂದಾಗಿ, ಮಂಗಳವಾರ ನಡೆದ ವಹಿವಾಟಿನಲ್ಲಿ ಭಾರತದ ರೂಪಾಯಿ ಮೌಲ್ಯ 75 ಪೈಸೆ ಏರಿಕೆಯಾಗಿದೆ. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ₹86.03 ಆಗಿದೆ.

ದೇಶದ ಷೇರುಪೇಟೆ ಸೂಚ್ಯಂಕಗಳ ಏರಿಕೆ ಸಹ ರೂಪಾಯಿ ಮೌಲ್ಯ ಹೆಚ್ಚಳವಾಗಲು ನೆರವಾಯಿತು ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 3.20ರಷ್ಟು ಇಳಿಕೆಯಾಗಿದ್ದು, ಪ್ರತೀ ಬ್ಯಾರೆಲ್‌ಗೆ 69.13 ಡಾಲರ್‌ ಆಗಿದೆ. ಸೋಮವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 23 ಪೈಸೆ ಇಳಿಕೆಯಾಗಿತ್ತು. 

ADVERTISEMENT

ಸೂಚ್ಯಂಕ ಏರಿಕೆ: ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 158 ಅಂಶ ಏರಿಕೆಯಾಗಿ, 82,055ಕ್ಕೆ ವಹಿವಾಟು ಅಂತ್ಯಗೊಂಡಿದೆ. ದಿನದ ವಹಿವಾಟಿನ ನಡುವೆ 1,121 ಅಂಶ ಜಿಗಿತ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 72 ಅಂಶ ಹೆಚ್ಚಳವಾಗಿ, 25,044ಕ್ಕೆ ಕೊನೆಗೊಂಡಿತು. 

ಆರಂಭಿಕ ವಹಿವಾಟಿನಲ್ಲಿ ದೇಶದ ಷೇರು ಸೂಚ್ಯಂಕಗಳು ಏರಿಕೆ ಕಂಡಿದ್ದವು. ಆದರೆ, ಇರಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಉಲ್ಲಂಘನೆ ಆಗಿದೆ ಎಂಬ ವರದಿಗಳಿಂದಾಗಿ ಹೂಡಿಕೆದಾರರು ಲಾಭ ಗಳಿಕೆಗಾಗಿ ಷೇರುಗಳನ್ನು ಮಾರಾಟ ಮಾಡಲು ಮುಂದಾದರು. ಹೀಗಾಗಿ, ಸೂಚ್ಯಂಕಗಳು ಆರಂಭಿಕ ಗಳಿಕೆಯನ್ನು ಉಳಿಸಿಕೊಳ್ಳಲಿಲ್ಲ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.