ADVERTISEMENT

ರೂಪಾಯಿ ಮೌಲ್ಯ ವರ್ಷದಲ್ಲಿ ಶೇ 3ರಷ್ಟು ಕುಸಿತ: ಯೂರೊ ವಿರುದ್ಧ ಗಳಿಕೆ!

ಆರ್ಥಿಕ ಬೆಳವಣಿಗೆ ದರ ಮಂದಗತಿ ಕಾರಣ: ತಜ್ಞರ ಹೇಳಿಕೆ

ಪಿಟಿಐ
Published 29 ಡಿಸೆಂಬರ್ 2024, 13:30 IST
Last Updated 29 ಡಿಸೆಂಬರ್ 2024, 13:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಪ್ರಸಕ್ತ ವರ್ಷದಲ್ಲಿ ಅಮೆರಿಕದ ಡಾಲರ್‌ ಎದುರು ಭಾರತದ ರೂಪಾಯಿ ಮೌಲ್ಯವು ಶೇ 3ರಷ್ಟು ಕುಸಿದಿದೆ. ದೇಶದ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಇರುವುದು ಹಾಗೂ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಮೌಲ್ಯ ಬಲಗೊಂಡಿರುವುದೇ ಇದಕ್ಕೆ ಕಾರಣ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಆದರೆ, ಇತರೆ ದೇಶಗಳ ಕರೆನ್ಸಿಗೆ ಹೋಲಿಸಿದರೆ ರೂಪಾಯಿ ಮೌಲ್ಯದ ಕುಸಿತ ಕಡಿಮೆಯಿದೆ. ಮುಂದಿನ ವರ್ಷವೂ ಅಲ್ಪ ಪ್ರಮಾಣದಲ್ಲಿ ಕುಸಿತ ಮುಂದುವರಿಯುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಇನ್ನೂ ನಿಂತಿಲ್ಲ. ಪಶ್ಚಿಮ ಏಷ್ಯಾ ಬಿಕ್ಕಟ್ಟು ಕೂಡ ಮುಂದುವರಿದಿದೆ. ಇದು ಕೆಂಪು ಸಮುದ್ರದಲ್ಲಿನ ಸರಕು ಸಾಗಣೆ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ಅಮೆರಿಕ ಸೇರಿ ಪ್ರಮುಖ ದೇಶಗಳಲ್ಲಿ ನಡೆದ ಚುನಾವಣೆಗಳು ಕೂಡ ರೂಪಾಯಿ ಮೌಲ್ಯ ಕುಸಿತದ ಮೇಲೆ ಪರಿಣಾಮ ಬೀರಿವೆ.

ADVERTISEMENT

ಇಂಗ್ಲೆಂಡ್, ಜಪಾನ್‌ ಸೇರಿ ಪ್ರಮುಖ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಹಣಕಾಸು ನೀತಿಗೆ ಸಂಬಂಧಿಸಿದಂತೆ ಕೈಗೊಂಡ ನಿಲುವು ರೂಪಾಯಿ ಮತ್ತು ಡಾಲರ್‌ ಮೇಲಷ್ಟೇ ಪರಿಣಾಮ ಬೀರಿಲ್ಲ. ಹಲವು ದೇಶಗಳ ಕರೆನ್ಸಿ ವಿನಿಮಯ ದರಕ್ಕೂ ಸವಾಲೊಡ್ಡಿವೆ ಎಂದು ಹೇಳಿದ್ದಾರೆ.

ಡಾಲರ್‌ ಎದುರು ಯೂರೊ ಹಾಗೂ ಜಪಾನ್‌ನ ಯೆನ್‌ ಮೌಲ್ಯದ ಕುಸಿತಕ್ಕೆ ಹೋಲಿಸಿದರೆ ರೂಪಾಯಿ ಮೌಲ್ಯದ ಕುಸಿತ ಕಡಿಮೆಯಿದೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯದ ಸ್ಥಿರತೆ ಕಾಯ್ದುಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್‌ ಹಲವು ಕ್ರಮಗಳನ್ನು ಕೈಗೊಂಡಿದೆ. ಕಚ್ಚಾ ತೈಲದ ಆಮದು ಹಾಗೂ ಹಿಗ್ಗುತ್ತಿರುವ ವಿದೇಶಿ ವ್ಯಾಪಾರದ ಕೊರತೆ ತಗ್ಗಿಸಲು ಡಾಲರ್‌ ಅತ್ಯಗತ್ಯವಾಗಿದೆ. ಹಾಗಾಗಿ, ಡಾಲರ್‌ ಖರೀದಿ ಮೂಲಕ ರೂಪಾಯಿಯ ಮೌಲ್ಯ ತಡೆಯಲು ಮುಂದಾಗಿದೆ.

‘ಆರ್‌ಬಿಐ ನಾನ್-ಡೆಲಿವೆರಿಬಲ್ ಫಾರ್ವರ್ಡ್ (ಎನ್‌ಡಿಎಫ್) ಮಾರುಕಟ್ಟೆಯನ್ನು ಪ್ರವೇಶಿಸಿದೆ. ಎನ್‌ಡಿಎಫ್‌ ಎಂದರೆ ಬದಲಿಸಲಾಗದ ವಿದೇಶಿ ಕರೆನ್ಸಿಗಳ ಅಲ್ಪಕಾಲದ ವಾಯಿದಾ ಪೇಟೆ ವಹಿವಾಟು ಎಂದರ್ಥ. ಇಲ್ಲಿ ಕರೆನ್ಸಿಗಳ ವಿತರಣೆ ಇರುವುದಿಲ್ಲ. ಭವಿಷ್ಯದ ನಿರ್ದಿಷ್ಟ ದಿನಕ್ಕೆ ಅನ್ವಯಿಸುವಂತೆ ಒಪ್ಪಿಕೊಂಡ ಕರೆನ್ಸಿ ವಿನಿಮಯ ದರ ಮತ್ತು ನೈಜ ದರದ ನಡುವಿನ ವ್ಯತ್ಯಾಸವನ್ನು ಪಾವತಿಸಲು ಒಪ್ಪಂದ ಮಾಡಿಕೊಳ್ಳಲು ಅವಕಾಶವಿದೆ. ಇದು ರೂಪಾಯಿ ಮೌಲ್ಯ ಕುಸಿತ ತಡೆಯಲು ನೆರವಾಗಲಿದೆ’ ಎಂದು ಬ್ರೋಕರೇಜ್ ಸಂಸ್ಥೆಯಾದ ಆನಂದ ರಾಠಿ ನಿರ್ದೇಶಕ (ಸರಕು ಮತ್ತು ಕರೆನ್ಸಿ) ನವೀನ್ ಮಾಥೂರ್ ಹೇಳುತ್ತಾರೆ.

ಮೌಲ್ಯ ಎಷ್ಟಿತ್ತು?

ಪ್ರಸಕ್ತ ವರ್ಷದ ಜನವರಿ 1ರಂದು ಡಾಲರ್‌ ಎದುರು ರೂಪಾಯಿ ಮೌಲ್ಯವು ₹83.19ಕ್ಕೆ ಕುಸಿದಿತ್ತು. ಡಿಸೆಂಬರ್‌ 27ರಂದು ₹85.59ಕ್ಕೆ ತಲುಪಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಶೇ 2ರಷ್ಟು ಕುಸಿತ ಕಂಡಿದೆ. ರೂಪಾಯಿ ಮೌಲ್ಯವು ಡಾಲರ್ ಎದುರು ಕುಸಿತ ಕಂಡರೂ ಯೆನ್‌ ವಿರುದ್ಧ ಶೇ 8.7ರಷ್ಟು ಹಾಗೂ ಯೂರೊ ವಿರುದ್ಧ ಶೇ 5ಕ್ಕೂ ಹೆಚ್ಚು ಗಳಿಕೆ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.