ADVERTISEMENT

22 ವರ್ಷ ಅನುಭವ, ಅಗಾಧ ಪರಿಣತಿ, ಮೆಟಾದ ಭಾರತದ ನೂತನ ಮುಖ್ಯಸ್ಥೆಯ ಬಗ್ಗೆ ಗೊತ್ತಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ನವೆಂಬರ್ 2022, 10:18 IST
Last Updated 17 ನವೆಂಬರ್ 2022, 10:18 IST
   

ಬೆಂಗಳೂರು: ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾದ ಭಾರತ ಮುಖ್ಯಸ್ಥೆಯಾಗಿ ಸಂಧ್ಯಾ ದೇವನಾಥನ್‌ ನೇಮಕವಾಗಿದ್ದಾರೆ. ಮೆಟಾದ ಘಟಾನುಘಟಿ ನಾಯಕರ ನಿರ್ಗಮನದ ಬೆನ್ನಲ್ಲೇ ಅವರು ಈ ಪ್ರತಿಷ್ಠಿತ ಹುದ್ದೆಯನ್ನು ವ‌ಹಿಸಿಕೊಳ್ಳಲಿದ್ದಾರೆ.

2023ರ ಜನವರಿ 1 ರಂದು ಸಂಧ್ಯಾ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಜಾಗತಿಕ ಉದ್ಯಮದಲ್ಲಿ 22 ವರ್ಷಗಳ ಅನುಭವ ಹೊಂದಿರುವ ಅವರು, ಬ್ಯಾಂಕಿಂಗ್‌, ಪಾವತಿ ಹಾಗೂ ತಂತ್ರಜ್ಞಾನದಲ್ಲಿ ಅಗಾಧ ಪರಿಣತಿ ಹೊಂದಿದ್ದಾರೆ. 2000ನೇ ಇಸವಿಯಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ.

ADVERTISEMENT

2016ರಲ್ಲಿ ‌ಫೇಸ್‌ಬುಕ್‌ ಸೇರಿದ್ದ ಸಂಧ್ಯಾ, ಸಿಂಗಾಪುರ ಹಾಗೂ ವಿಯೇಟ್ನಾಂನಲ್ಲಿ ಫೇಸ್‌ಬುಕ್‌ನ ಉದ್ಯಮ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

2020ರಲ್ಲಿ ಏಷ್ಯಾ ಪೆಸಿಫಿಕ್‌ ವಲಯದಲ್ಲಿ ಉದ್ಯಮ ವಿಸ್ತರಣೆ ಮಾಡುವ ಮೆಟಾದ ಯೋಜನೆಯಲ್ಲಿ ಸಂಧ್ಯಾ ಪ್ರಮುಖ ಪಾತ್ರ ವಹಿಸಿದ್ದರು.

ಮಹಿಳಾ ಮುಂದಾಳತ್ವದ ಬಗ್ಗೆ ಅಪಾರ ಒಲವಿರುವ ಅವರು, ಕಚೇರಿಯಲ್ಲಿ ವೈವಿಧ್ಯತೆಗೆ ಒತ್ತು ನೀಡುತ್ತೇನೆ ಎಂದು ತಮ್ಮ ಲಿಂಕ್ಡ್‌ ಇನ್‌ನಲ್ಲಿ ಬರೆದುಕೊಂಡಿದ್ದಾರೆ.

ಪೆಪ್ಪರ್‌ ಫಿನಾನ್ಷಿಯಲ್‌ ಸರ್ವೀಸಸ್‌ನ ಜಾಗತಿಕ ಬೋರ್ಡ್‌ ಸದಸ್ಯೆಯಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.