ADVERTISEMENT

ಹೂಡಿಕೆಯ ಜಾಣ ನಿರ್ವಹಣೆ

ಸಂದೀಪ್ ಸಿಕ್ಕಾ
Published 12 ಮೇ 2020, 19:30 IST
Last Updated 12 ಮೇ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವದಾದ್ಯಂತ ಹರಡಿರುವ ಕೊರೊನಾ ವೈರಾಣು ಸೃಷ್ಟಿಸಿರುವ ತಲ್ಲಣವು ಮಾರುಕಟ್ಟೆಯನ್ನು ಅಸ್ಥಿರಗೊಳಿಸಿದೆ. ಬಂಡವಾಳ ಮಾರುಕಟ್ಟೆ ಪಾತಾಳಕ್ಕೆ ಇಳಿಯುತ್ತಲೇ ಇದೆ. ಕೊರೊನಾ ಹರಡುವಿಕೆ ಮತ್ತು ಮಾರುಕಟ್ಟೆ ಈ ಎರಡೂ ಕಡೆಗಳಲ್ಲಿ ತೀವ್ರ ಚಲನೆ ಇದೆ. ಷೇರು ಮಾರುಕಟ್ಟೆ ಮತ್ತು ಡಾಲರ್‌ ಎದುರಿನ ರೂಪಾಯಿ ವಿನಿಮಯ ದರದ ತೀವ್ರ ಏರಿಳಿತವನ್ನು ಮರೆತು ಹೂಡಿಕೆದಾರರು ದೀರ್ಘಕಾಲೀನ ಗುರಿಯೆಡೆಗೆ ಈಗ ಗಮನ ಹರಿಸಬೇಕಾಗಿದೆ. ಮಾರುಕಟ್ಟೆಯಲ್ಲಿ ಹೂಡಿಕೆದಾರರು ಸದಾ ಚಾಲ್ತಿಯಲ್ಲಿ ಇರಬೇಕು ಎಂದರೆ ಮಾರುಕಟ್ಟೆಯು ಚೇತರಿಕೆಯ ಹಾದಿಗೆ ಹೊರಳುತ್ತಿರುವಾಗಲೇ ಹೂಡಿಕೆ ಮಾಡಲು ಮುಂದಾಗಬೇಕು.

ಇದುವರೆಗೂ ಹೂಡಿಕೆ ಕುರಿತ ಮಾತುಕತೆ, ಈಕ್ವಿಟಿ ಅಥವಾ ಷೇರು ಹೂಡಿಕೆಗಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದವು. ಉಳಿದ ಹೂಡಿಕೆ ಉತ್ಪನ್ನಗಳು ಸಾಮಾನ್ಯವಾಗಿ ಹಿಂದಿನ ಸೀಟಿನಲ್ಲಿದ್ದವು. ಷೇರುಗಳ ರೂಪದಲ್ಲಿ ನಾವು ಹೆಚ್ಚು ಸಂಪತ್ತು ಹೊಂದಿದ್ದರೆ ಹೆಚ್ಚಿನ ನಷ್ಟ ಅನುಭವಿಸಬೇಕಾಗುತ್ತದೆ. ಈಗಾಗಲೇ ಸಾಕಷ್ಟು ನಷ್ಟದ ರುಚಿ ಸವಿದಿದ್ದೇವೆ. ಹೀಗಾಗಿ ನಾವು ನಮ್ಮ ಹೂಡಿಕೆಯನ್ನು ವಿವಿಧ ಉತ್ಪನ್ನಗಳಲ್ಲಿ ಸಮಾನವಾಗಿ ಹಂಚಬೇಕಾಗುತ್ತದೆ. ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬಾರದು ಎನ್ನುವ ಹೂಡಿಕೆಯ ಮೂಲ ಮಂತ್ರವನ್ನು ಯಾರೊಬ್ಬರೂ ಮರೆಯಬಾರದು.

ವಿವಿಧ ಬಗೆಯ ಹೂಡಿಕೆಯ ಹಂಚಿಕೆಗಳು ಹೇಗೆ ಭಿನ್ನವಾಗಿ ಹೂಡಿಕೆದಾರರಿಗೆ ಲಾಭ ತಂದು ಕೊಡುತ್ತವೆ ಎಂಬುದನ್ನೂ ನಾವು ಗಮನದಲ್ಲಿ ಇಡಬೇಕಾಗುತ್ತದೆ.

ADVERTISEMENT

ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆ ತೀವ್ರ ನಷ್ಟಕ್ಕೆ ಗುರಿಯಾಗುತ್ತಿದೆ. 2020ರ ಹಣಕಾಸು ವರ್ಷದ ಆರಂಭದಲ್ಲಿಯೇ ಹೂಡಿಕೆದಾರರ ಸಂಪತ್ತು ಗಮನಾರ್ಹವಾಗಿ ಕುಸಿತ ಕಾಣುತ್ತಿದೆ. ಈ ಕಾರಣಕ್ಕೆ ಹೂಡಿಕೆದಾರರು ತಮ್ಮ ಹೂಡಿಕೆ ನಿರ್ಧಾರಗಳನ್ನು ಪರಾಮರ್ಶೆಗೆ ಒಳಪಡಿಸಬೇಕು. ಹಣ ಹೂಡಿಕೆಯ ಹಂಚಿಕೆಯನ್ನು ಸಮತೋಲನಗೊಳಿಸಬೇಕು. ‘ಕೋವಿಡ್-19’ರ ಕಾರಣದಿಂದಾಗಿ ಪ್ರತಿಯೊಬ್ಬರೂ ತಮ್ಮ ಹೂಡಿಕೆಯ ಸ್ವರೂಪದಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳಬೇಕು. ಹೂಡಿಕೆಯಲ್ಲಿ ನಾವು ಪಕ್ಷಪಾತ ಧೋರಣೆ ತಳೆದರೆ ಅದರಿಂದ ಹೂಡಿಕೆಯ ಪ್ರತಿಫಲದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಮಾರುಕಟ್ಟೆಯ ತಲ್ಲಣಕ್ಕೂ ಕಾರಣವಾಗುತ್ತದೆ. ಇದನ್ನು ನಾವು ಈಗಾಗಲೇ ನೋಡಿದ್ದೇವೆ ಕೂಡ.

ದೀರ್ಘಾವಧಿಯ ಲಾಭದ ಗುರಿಯಲ್ಲಿ ಹೂಡಿಕೆದಾರರಿಗೆ ಸ್ವಭಾವತಃ ಇರುವ ಆಶಾವಾದವು ಅವರನ್ನು ಸಕಾರಾತ್ಮಕ ಚಿಂತನೆ ಮಾಡುವಂತೆ ಪ್ರೇರಣೆ ನೀಡುತ್ತದೆ. ಆದರೆ, ಹೂಡಿಕೆಗಳಲ್ಲಿ ಆಗಿರುವ ಇತ್ತೀಚೆಗಿನ ನಕಾರಾತ್ಮಕ ಬೆಳವಣಿಗೆಗಳ ಫಲವಾಗಿ ಆಶಾವಾದ ಬತ್ತಿ ಹೋಗುತ್ತಿದೆ. ಹೀಗಾಗಿ, ಹೂಡಿಕೆದಾರರು ಗಳಿಕೆಯ ಬಹುಪಾಲನ್ನು ಮರು ಹೂಡಿಕೆಯತ್ತ ಗಮನ ಹರಿಸಬೇಕು. ಇದು ಉತ್ತಮ ಫಲಿತಾಂಶ ನೀಡಲಿದೆ.

ದೀರ್ಘಕಾಲದ ಆರ್ಥಿಕ ಗುರಿಗಳಿಗಾಗಿ ಸಾಲದ ಹೊರೆಯನ್ನು ಹೆಚ್ಚಿಸಿಕೊಳ್ಳಬಾರದು. ಸಾಲದ ಹೊರೆ ನಮ್ಮಲ್ಲಿ ಹೆಚ್ಚಿರಲೂ ಬಾರದು. ಷೇರು ಅಥವಾ ಈಕ್ವಿಟಿಯಲ್ಲಿ ಹೂಡಿಕೆದಾರರು ಸಾಂಪ್ರದಾಯಿಕ ಧೋರಣೆ ತಳೆಯಬಾರದು. ಮಾರುಕಟ್ಟೆಯ ಕಂಪನಿಗಳ ಪೈಕಿ ಸುಸ್ಥಿರ ಸಾಧನೆ ತೋರುವ ಕಂಪನಿಗಳನ್ನು ಆಯ್ಕೆ ಮಾಡುವುದು ಬಹುಮುಖ್ಯವಾಗುತ್ತದೆ.

ಷೇರುಗಳಲ್ಲಿನ ಹೂಡಿಕೆಗೆ ಉತ್ತಮ ಯೋಗ್ಯ ಹಿನ್ನೆಲೆ ಹೊಂದಿರುವ, ಉತ್ತಮ ಬ್ಯಾಲನ್ಸ್‌ಶೀಟ್ ಹೊಂದಿರುವ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಕಂಪನಿಗಳು ಮಾರುಕಟ್ಟೆಯಲ್ಲಿ ಕಂಡು ಬರುವ ಏರಿಳಿತ ಚಂಡಮಾರುತದ ಹೊಡೆತವನ್ನು ತಮ್ಮ ವಿಶಿಷ್ಟ ಮಾರುಕಟ್ಟೆ ಕಾರ್ಯತಂತ್ರಗಳ ಮೂಲಕ ತಾಳಿಕೊಂಡಿರುತ್ತವೆ. ಪರಿಸ್ಥಿತಿ ತಿಳಿಗೊಳ್ಳುವವರೆಗೂ ವಹಿವಾಟು ಮುಂದುವರೆಸುವ ಸಹನೆ ತೋರಬೇಕು.

ಲಾಕ್‌ಡೌನ್‌ನಿಂದ ಉದ್ಭವಿಸಿರುವ ಬಿಕ್ಕಟ್ಟಿನಿಂದಾಗಿ ವೈಯಕ್ತಿಕ ನೆಲೆಯಲ್ಲಿಯೂ ಹಣದ ಹರಿವಿಗೆ ಅಡೆತಡೆ ಕಂಡು ಬಂದಿದೆ. ಸಂಬಳ ಪಾವತಿ ವಿಳಂಬ, ಕ್ಷೀಣಿಸಿರುವ ಸಂಬಳ ಹೆಚ್ಚಳ, ಭತ್ಯೆ, ಬೋನಸ್ ತಡೆ ಮೊದಲಾದ ತಾತ್ಕಾಲಿಕ ಅಡ್ಡಿಗಳಿಂದ ಹಲವರ ಬಳಿಯಲ್ಲಿ ಹಣದ ಕೊರತೆ ಕಂಡು ಬಂದಿದೆ. ಇದೇ ಸಮಯದಲ್ಲಿ ನಿಯಮಿತ ಮತ್ತು ಮರುಕಳಿಸುವ ವೆಚ್ಚಗಳನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ.

ಸದ್ಯದ ಅನಿಶ್ಚಿತತೆಯ ಸಂದರ್ಭದಲ್ಲಿ ತುರ್ತು ನಿಧಿಗಳ ಮಹತ್ವದ ಬಗ್ಗೆ ಗಮನ ಹರಿಸಬೇಕು. ಸಾಮಾನ್ಯವಾಗಿ ಪ್ರತಿಯೊಬ್ಬರೂ ತುರ್ತು ಸಂದರ್ಭಕ್ಕಾಗಿ ಹಣವನ್ನು ಮೀಸಲಿರಿಸಬೇಕು. ಅದು ಕನಿಷ್ಠ ಆರು ತಿಂಗಳಾದರೂ ಉಪಯೋಗಕ್ಕೆ ಬರುವಂತಿರಬೇಕು.

ಇದುವರೆಗೂ ನೀವು ತುರ್ತು ನಿಧಿಯನ್ನು ಹೊಂದುವತ್ತ ಯೋಚಿಸಿರದಿದ್ದರೆ ಕೂಡಲೇ ನಿರ್ದಿಷ್ಟ ಮೊತ್ತವನ್ನು ಪ್ರತ್ಯೇಕವಾಗಿ ತೆಗೆದು ಇರಿಸುವುದರತ್ತ ಗಮನಹರಿಸಿ. ಸದ್ಯದ ಬಿಕ್ಕಟ್ಟಿನ ಪರಿಸ್ಥಿತಿ ತಿಳಿಯಾಗುವವರೆಗೂ ಇದು ಅನಿವಾರ್ಯ.

’ಕೋವಿಡ್- 19’ ಬಿಕ್ಕಟ್ಟು ದೂರವಾದ ನಂತರವೂ ತುರ್ತು ನಿಧಿಯನ್ನು ಖರ್ಚು ಮಾಡದೇ ಹಾಗೇ ಇರಿಸಿಕೊಳ್ಳಿ. ಇದೀಗ ಕೊರೊನಾ ವೈರಸ್ ಬಿಕ್ಕಟ್ಟು ನಿಮ್ಮ ಹೂಡಿಕೆ ನಿರ್ಧಾರಗಳನ್ನು ಬದಲಿಸಿ ಬಿಟ್ಟಿದೆ. ಹಣಕಾಸಿನ ಮಾರುಕಟ್ಟೆಯಲ್ಲಿ ನೀವೇಲ್ಲಿದ್ದೀರಿ, ಯಾವ ಹಂತದಲ್ಲಿದ್ದೀರಿ ಎಂಬುದರ ಬಗ್ಗೆ ಸ್ವವಿಮರ್ಶೆ ಮಾಡಿಕೊಳ್ಳಿ. ಮೂಲಭೂತ ಹೂಡಿಕೆ ತತ್ವಗಳಿಗೆ ಹಿಂತಿರುಗಿ. ನಿಮ್ಮ ಹಣಕಾಸಿನ ಗುರಿಗಳನ್ನು ಮರು ನಿಗದಿಪಡಿಸಿ. ನಿಮ್ಮ ಹೂಡಿಕೆ ಸುರಕ್ಷಿತವಾಗಿರಲಿ. ನೆಮ್ಮದಿಯಿಂದ ಹೂಡಿಕೆ ಮಾಡಿರಿ.

(ಲೇಖಕ, ನಿಪ್ಪಾನ್ ಇಂಡಿಯಾ ಮ್ಯೂಚುವಲ್ ಫಂಡ್‌ನ ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.