ನವದೆಹಲಿ: ₹ 414 ಕೋಟಿ ವಂಚಿಸಿದ ಕಂಪನಿಯೊಂದರ ವಿರುದ್ಧ ನಾಲ್ಕು ವರ್ಷದ ಬಳಿಕ ಸಿಬಿಐಗೆ ದೂರು ಸಲ್ಲಿಸಲಾಗಿದೆ.ರಾಮ್‌ದೇವ್ ಇಂಟರ್‌ನ್ಯಾಷನಲ್ ಕಂಪನಿಯು ವಿವಿಧ ಬ್ಯಾಂಕುಗಳಿಗೆ ₹ 414 ಕೋಟಿ ವಂಚಿಸಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ದೂರು ನೀಡಿದೆ.
ಎಸ್‌ಬಿಐ ನೇತೃತ್ವದ ಆರು ಬ್ಯಾಂಕ್‌ಗಳಿಂದ ಕಂಪನಿಯು ಪಡೆದಿದ್ದ ಸಾಲವು2016ರ ಜನವರಿ 27ಕ್ಕೆ ಎನ್‌ಪಿಎ (ವಸೂಲಾಗದ ಸಾಲ) ಆಗಿದೆ. ಆದರೆ, ಎಸ್‌ಬಿಐ ದೂರು ನೀಡಿರುವುದು 2020ರ ಫೆಬ್ರುವರಿ 25ರಂದು.
ಬಾಸ್ಮತಿ ಅಕ್ಕಿ ರಫ್ತು ಮಾಡುವ ಈ ಕಂಪನಿಯ ಮೂವರು ಪ್ರವರ್ತಕರು ದೇಶ ಬಿಟ್ಟು ಪರಾರಿಯಾಗುವ ಮೊದಲೇ ತಮ್ಮೆಲ್ಲಾ ಸ್ವತ್ತುಗಳನ್ನು ಮಾರಾಟ ಮಾಡಿದ್ದಾರೆ. ಹೀಗಾಗಿ ಸಾಲ ವಸೂಲಿ ಮಾಡುವುದು ಕಷ್ಟ ಎನ್ನುವುದನ್ನು ಅರಿತ ಎಸ್‌ಬಿಐ, ಅಂತಿಮವಾಗಿ ಸಿಬಿಐಗೆ ದೂರು ನೀಡಿದೆ ಎಂದು ತನಿಖೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ:ಕಂಪನಿಯು ಪಶ್ಚಿಮ ಏಷ್ಯಾ ಮತ್ತು ಯುರೋಪ್‌ಗೆ ಬಾಸ್ಮತಿ ಅಕ್ಕಿ ರಫ್ತು ಮಾಡುತ್ತಿದ್ದು,ಹರಿಯಾಣದಕರ್ನಾಲ್ ಜಿಲ್ಲೆ
ಯಲ್ಲಿ ಕಂಪನಿಯು ಮೂರು ಅಕ್ಕಿ ಗಿರಣಿ, 8 ಸಂಸ್ಕರಣೆ ಮತ್ತು ಬೇರ್ಪಡಿಸುವ ಘಟಕಗಳನ್ನು ಹೊಂದಿತ್ತು.
ಕಂಪನಿಯು ಹಳೆಯ ಘಟಕದಿಂದ ಯಂತ್ರಗಳನ್ನು ಸಂಪೂರ್ಣವಾಗಿ ತೆಗೆದು, ಲೆಕ್ಕಪತ್ರದಲ್ಲಿ ಅವ್ಯವಹಾರ ಎಸಗಿ, ಬ್ಯಾಂಕ್‌ಗಳು ನೀಡಿರುವ ಸಾಲದ ಮೊತ್ತವನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ ಎಂದು ಎಸ್‌ಬಿಐ ದೂರಿನಲ್ಲಿ ತಿಳಿಸಿದೆ.ಇದರ ಆಧಾರದ ಮೇಲೆಕಂಪನಿ ಪ್ರವರ್ತಕರು ಮತ್ತು ನಿರ್ದೇಶಕರೂ ಆಗಿರುವ ನರೇಶ್ ಕುಮಾರ್, ಸುರೇಶ್ ಕುಮಾರ್ ಮತ್ತು ಸಂಗೀತಾ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೂರು ಸಲ್ಲಿಸುವುದರಲ್ಲಿ ಯಾವುದೇ ವಿಳಂಬ ಆಗಿಲ್ಲ. ಕಂಪನಿ ಮಾಲೀಕರು ಕಣ್ಮರೆಯಾಗಿದ್ದಾರೆ ಎನ್ನುವುದು ತಿಳಿದಿದ್ದೇ ಒಂದು ವರ್ಷದ ಹಿಂದೆ ಎಂದು ಎಸ್‌ಬಿಐ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.