ನವದೆಹಲಿ: ರೆಪೊ ದರ ಆಧರಿತ ಸಾಲದ ಮೇಲಿನ ಬಡ್ಡಿದರವನ್ನು ಶೇ 0.25ರಷ್ಟು ಕಡಿತಗೊಳಿಸಲಾಗಿದೆ. ಬಡ್ಡಿದರ ಶೇ 8.25ರಷ್ಟಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೋಮವಾರ ತಿಳಿಸಿದೆ.
ರೆಪೊ ದರ ಆಧರಿತ ಎಕ್ಸ್‌ಟರ್ನಲ್ ಬೆಂಚ್‌ಮಾರ್ಕ್ ಲೆಂಡಿಂಗ್ ರೇಟ್ (ಇಬಿಎಲ್‌ಆರ್) ಅನ್ನು ಶೇ 8.65ಕ್ಕೆ ಇಳಿಸಿದೆ. ಠೇವಣಿ ಮೇಲಿನ ಬಡ್ಡಿ ದರವನ್ನು ಶೇ 0.10ರಿಂದ ಶೇ 0.25ರವರೆಗೆ ಕಡಿತ ಮಾಡಿದೆ. ಪರಿಷ್ಕೃತ ದರವು ಮಂಗಳವಾರದಿಂದ (ಏ.15) ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಬಿಒಎಂ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಮಹಾರಾಷ್ಟ್ರ (ಬಿಒಎಂ) ರೆಪೊ ಆಧರಿತ ಸಾಲದ ಮೇಲಿನ ಬಡ್ಡಿದರವನ್ನು ಶೇ 0.25ರಷ್ಟು ಕಡಿತಗೊಳಿಸಿದೆ. ಬಡ್ಡಿದರವನ್ನು ಶೇ 9.05ರಿಂದ ಶೇ 8.80ಕ್ಕೆ ತಗ್ಗಿಸಿದೆ. ಗೃಹ ಸಾಲದ ವಾರ್ಷಿಕ ಬಡ್ಡಿದರ ಶೇ 7.85 ಮತ್ತು ವಾಹನ ಸಾಲ ಶೇ 8.20ರಿಂದ ಆರಂಭವಾಗಲಿದೆ ಎಂದು ಬ್ಯಾಂಕ್ ತಿಳಿಸಿದೆ.
ಎಚ್‌ಡಿಎಫ್‌ಸಿ: ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವನ್ನು ಶೇ 0.25ರಷ್ಟು ಇಳಿಕೆ ಮಾಡಿದ್ದು, ಶೇ 2.75ರಷ್ಟಾಗಿದೆ. ಇದು ಏಪ್ರಿಲ್ 12ರಿಂದ ಜಾರಿಗೆ ಬಂದಿದೆ ಎಂದು ಬ್ಯಾಂಕ್ ತಿಳಿಸಿದೆ.
ಕಳೆದ ವಾರ ನಡೆದ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ರೆಪೊ ದರದಲ್ಲಿ ಶೇ 0.25ರಷ್ಟು ಕಡಿತಗೊಳಿಸಿದೆ. ಇದರ ಬೆನ್ನಲ್ಲೇ ಬ್ಯಾಂಕ್‌ಗಳು ಈ ಲಾಭವನ್ನು ಸಾಲಗಾರರಿಗೆ ವರ್ಗಾಯಿಸಲು ಮುಂದಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.