ADVERTISEMENT

ಬಂಡವಾಳ ಸಂಗ್ರಹದ ಉದ್ದೇಶ: ದೊಡ್ಡ ಬ್ಯಾಂಕ್‌ಗಳಿಂದ ಷೇರು ಮಾರಾಟ?

ಪಿಟಿಐ
Published 23 ಆಗಸ್ಟ್ 2020, 12:42 IST
Last Updated 23 ಆಗಸ್ಟ್ 2020, 12:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌–19 ಬಿಕ್ಕಟ್ಟಿನ ಸಂದರ್ಭದಲ್ಲಿ ನಾಲ್ಕರಿಂದ ಐದು ದೊಡ್ಡ ಬ್ಯಾಂಕ್‌ಗಳು ತಮ್ಮ ಬಂಡವಾಳ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮುಂದಾಗಿವೆ ಎಂದು ಬ್ಯಾಂಕಿಂಗ್‌ ಮೂಲಗಳು ತಿಳಿಸಿವೆ.

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ), ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ), ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) ಹಾಗೂ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಸೇರಿದಂತೆ ನಾಲ್ಕರಿಂದ ಐದು ದೊಡ್ಡ ಬ್ಯಾಂಕ್‌ಗಳು ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಸಾಂಸ್ಥಿಕ ಹೂಡಿಕೆದಾರರಿಗೆ ತಮ್ಮ ಷೇರುಗಳನ್ನು ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ಹೇಳಿವೆ.

ಅಕ್ಟೋಬರ್‌ ಅಂತ್ಯದ ವೇಳೆಗೆ ಬ್ಯಾಂಕ್‌ಗಳಿಗೆ ತಮ್ಮ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ), ಸಾಲ ಮರುಹೊಂದಾಣಿಕೆ ಹಾಗೂ ರೇಟಿಂಗ್ಸ್‌ನ ಸ್ಪಷ್ಟ ಚಿತ್ರಣ ಸಿಗಲಿದೆ. ಆ ಬಳಿಕ ಮೂರನೇ ತ್ರೈಮಾಸಿಕದ ಅಂತ್ಯಕ್ಕೆ ಅಥವಾ ನಾಲ್ಕನೇ ತ್ರೈಮಾಸಿಕದ ಅವಧಿಯಲ್ಲಿ ಬಂಡವಾಳ ಸಂಗ್ರಹಕ್ಕೆ ಮುಂದಾಗಲಿವೆ. ದೇಶಿ ಮತ್ತು ಜಾಗತಿಕ ಹೂಡಿಕೆದಾರರು ಭಾಗವಹಿಸಲು ಅವಕಾಶ ಇರುವಂತೆ ಬಂಡವಾಳ ಸಂಗ್ರಹಿಸಲು ಯೋಜನೆ ರೂಪಿಸಲಿವೆ ಎಂದೂ ಹೇಳಿವೆ.

ADVERTISEMENT

ನಾಲ್ಕನೇ ತ್ರೈಮಾಸಿಕದಲ್ಲಿ ಬಂಡವಾಳ ಸಂಗ್ರಹಿಸುವುದಾಗಿ ‘ಪಿಎನ್‌ಬಿ’ ಈಗಾಗಲೇ ಹೇಳಿದೆ. ಸಾಲಪತ್ರಗಳು ಮತ್ತು ಷೇರುಗಳನ್ನು ಮಾರಾಟ ಮಾಡುವ ಮೂಲಕ ಬಂಡವಾಳ ಸಂಗ್ರಹಿಸಲು ಸರ್ಕಾರಿ ಸ್ವಾಮ್ಯದ ಬಹುತೇಕ ಬ್ಯಾಂಕ್‌ಗಳು ತಮ್ಮ ಷೇರುದಾರರ ಒಪ್ಪಿಗೆ ಪಡೆದುಕೊಂಡಿವೆ.

ಖಾಸಗಿ ವಲಯದಲ್ಲಿ ಐಸಿಐಸಿಐ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌ ಮತ್ತು ಕೋಟಕ್‌ ಮಹೀಂದ್ರಾ ಬ್ಯಾಂಕ್‌ಗಳು ಅರ್ಹ ಸಾಂಸ್ಥಿಕ ವಿತರಣೆ (ಕ್ಯುಐಪಿ) ಮೂಲಕ ಈಗಾಗಲೇ ಬಂಡವಾಳ ಸಂಗ್ರಹಿಸಿವೆ.

ಬಂಡವಾಳ ಸಂಗ್ರಹಕ್ಕೆ ಒಪ್ಪಿಗೆ

ಎಸ್‌ಬಿಐ; ₹ 20 ಸಾವಿರ ಕೋಟಿ

ಪಿಎನ್‌ಬಿ; ₹ 7 ಸಾವಿರ ಕೋಟಿ

ಬಿಒಬಿ; ₹ 9 ಸಾವಿರ ಕೋಟಿ

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ; ₹ 6,800 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.