ADVERTISEMENT

ಅಮೆರಿಕದ ಸುಂಕ ಅನಿಶ್ಚಿತತೆಯ ನಡುವೆಯೂ SBI ಲಾಭ ಶೇ 12ರಷ್ಟು ಹೆಚ್ಚಳ

ಕಾರ್ಪೊರೇಟ್ ಸಾಲ ನೀಡಿಕೆ ಪ್ರಮಾಣ ಎರಡಂಕಿ: ಸಿ.ಎಸ್.ಸೆಟ್ಟಿ ವಿಶ್ವಾಸ

ರಾಯಿಟರ್ಸ್
ಪಿಟಿಐ
Published 8 ಆಗಸ್ಟ್ 2025, 14:24 IST
Last Updated 8 ಆಗಸ್ಟ್ 2025, 14:24 IST
ಎಸ್‌ಬಿಐ
ಎಸ್‌ಬಿಐ   

ನವದೆಹಲಿ/ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ₹19,160 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹17,035 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಶೇ 12ರಷ್ಟು ಹೆಚ್ಚಳವಾಗಿದೆ ಎಂದು ಬ್ಯಾಂಕ್ ಷೇರುಪೇಟೆಗೆ ಶುಕ್ರವಾರ ತಿಳಿಸಿದೆ.

ಕಳೆದ ಜೂನ್ ತ್ರೈಮಾಸಿಕದಲ್ಲಿ ಒಟ್ಟು ₹1,22,688 ಕೋಟಿ ವರಮಾನ ಗಳಿಸಿತ್ತು. ಈ ಬಾರಿ ₹1,35,342 ಕೋಟಿ ಗಳಿಸಿದೆ. ಬಡ್ಡಿ ಮೂಲಕ ₹1,17,996 ಕೋಟಿ ಗಳಿಸಲಾಗಿದೆ. ಕಾರ್ಯಾಚರಣೆ ಲಾಭ ₹30,544 ಕೋಟಿಯಾಗಿದೆ ಎಂದು ತಿಳಿಸಿದೆ. 

ADVERTISEMENT

ಒಟ್ಟು ವಸೂಲಾಗದ ಸಾಲದ ಪ್ರಮಾಣವು (ಜಿಎನ್‌ಪಿಎ) ಶೇ 1.83ಕ್ಕೆ ಇಳಿದಿದೆ. ನಿವ್ವಳ ಎನ್‌ಪಿಎ ಶೇ 0.57ರಿಂದ ಶೇ 0.47ಕ್ಕೆ ತಗ್ಗಿದೆ. ಬ್ಯಾಂಕ್‌ನ ಸಮರ್ಪಕ ಬಂಡವಾಳ ಅನುಪಾತವು (ಸಿಎಆರ್‌) ಶೇ 13.86ರಿಂದ ಶೇ 14.63ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.

‘ಅಮೆರಿಕದ ಸುಂಕ ಅನಿಶ್ಚಿತತೆಯ ನಡುವೆಯೂ ಬ್ಯಾಂಕ್‌ನ ಕಾರ್ಪೊರೇಟ್ ಸಾಲ ನೀಡಿಕೆ ಪ್ರಮಾಣವು ಎರಡಂಕಿ ಬೆಳವಣಿಗೆ ದಾಖಲಿಸುವ ವಿಶ್ವಾಸವನ್ನು ಹೊಂದಲಾಗಿದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ಸಿ.ಎಸ್.ಸೆಟ್ಟಿ ಹೇಳಿದ್ದಾರೆ.

ಅಮೆರಿಕದ ಸುಂಕದಿಂದ ವ್ಯವಹಾರದ ಮೇಲೆ ನೇರ ಪರಿಣಾಮ ಕಡಿಮೆ ಇರಲಿದೆ. ಅನಿಶ್ಚಿತತೆಯು ವ್ಯವಹಾರಗಳನ್ನು ನಿಧಾನಗೊಳಿಸಬಹುದು, ಇದು ಹೂಡಿಕೆ ನಿರ್ಧಾರಗಳನ್ನು ವಿಳಂಬಗೊಳಿಸಬಹುದು. ಆದರೂ, ಈ ಆರ್ಥಿಕ ವರ್ಷದಲ್ಲಿ ಕಾರ್ಪೊರೇಟ್‌ ಸಾಲ ನೀಡಿಕೆ ಪ್ರಮಾಣ ಶೇ 10ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಬ್ಯಾಂಕ್‌ಗಳ ಲಾಭ ₹44218 ಕೋಟಿ

ನವದೆಹಲಿ: ಸಾರ್ವಜನಿಕ ವಲಯದ 12 ಬ್ಯಾಂಕ್‌ಗಳು ಜೂನ್‌ ತ್ರೈಮಾಸಿಕದಲ್ಲಿ ₹44218 ಕೋಟಿ ಲಾಭ ಗಳಿಸಿವೆ. ಕಳೆದ ಜೂನ್ ತ್ರೈಮಾಸಿಕದಲ್ಲಿ ₹39974 ಕೋಟಿ ಲಾಭ ಗಳಿಸಿದ್ದವು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಶೇ 11ರಷ್ಟು ಹೆಚ್ಚಳವಾಗಿದೆ. ಈ ಲಾಭದಲ್ಲಿ ಎಸ್‌ಬಿಐ ಪಾಲು ಶೇ 43ರಷ್ಟಿದ್ದು ₹19160 ಕೋಟಿ ಆಗಿದೆ.

ಇಂಡಿಯನ್‌ ಓವರ್‌ಸೀಸ್ ಬ್ಯಾಂಕ್ ₹1111 ಕೋಟಿ ಪಂಜಾಬ್‌ ಆ್ಯಂಡ್ ಸಿಂಧ್ ಬ್ಯಾಂಕ್ ₹269 ಕೋಟಿ ಸೆಂಟ್ರಲ್ ಬ್ಯಾಂಕ್‌ ಆಫ್ ಇಂಡಿಯಾ ₹1169 ಕೋಟಿ ಇಂಡಿಯನ್ ಬ್ಯಾಂಕ್ ₹2973 ಕೋಟಿ ಬ್ಯಾಂಕ್ ಆಫ್ ಮಹಾರಾಷ್ಟ್ರ ₹1593 ಕೋಟಿ ಲಾಭ ಗಳಿಸಿವೆ. ಆದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಲಾಭದಲ್ಲಿ ಶೇ 48ರಷ್ಟು ಇಳಿಕೆಯಾಗಿದ್ದು ₹1675 ಕೋಟಿಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.