ADVERTISEMENT

ಯೆಸ್‌ ಬ್ಯಾಂಕ್‌ನಲ್ಲಿ ಎಸ್‌ಬಿಐ ಹೂಡಿಕೆ

₹ 7,250 ಕೋಟಿಗೆ ಶೇ 49ರಷ್ಟು ಪಾಲು ಬಂಡವಾಳ ಖರೀದಿಗೆ ‘ಇಸಿಸಿಬಿ’ ಒಪ್ಪಿಗೆ

ಪಿಟಿಐ
Published 12 ಮಾರ್ಚ್ 2020, 19:34 IST
Last Updated 12 ಮಾರ್ಚ್ 2020, 19:34 IST
   

ಮುಂಬೈ: ಹಣಕಾಸು ಸಂಕಷ್ಟದಲ್ಲಿರುವ ಯೆಸ್‌ ಬ್ಯಾಂಕ್‌ನ ಶೇ 49ರಷ್ಟು ಷೇರು ಖರೀದಿಸಲು ₹ 7,250 ಕೋಟಿ ಹೂಡಿಕೆ ಮಾಡಲು ಒಪ್ಪಿಗೆ ದೊರೆತಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತಿಳಿಸಿದೆ.

ಕೇಂದ್ರೀಯ ಮಂಡಳಿಯ ಕಾರ್ಯನಿರ್ವಾಹಕ ಸಮಿತಿ (ಇಸಿಸಿಬಿ) ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಪ್ರತಿ ಷೇರಿಗೆ ₹ 10ರಂತೆ ಒಟ್ಟಾರೆ 725 ಕೋಟಿ ಷೇರುಗಳನ್ನು ಖರೀದಿಸಲಾಗುವುದು ಎಂದು ‘ಎಸ್‌ಬಿಐ’ ಷೇರುಪೇಟೆಗೆ ಮಾಹಿತಿ ನೀಡಿದೆ.

ಆರ್‌ಬಿಐ, ಕಳೆದ ವಾರ ಬ್ಯಾಂಕ್‌ನ ಪುನಶ್ಚೇತನ ಯೋಜನೆ ರೂಪಿಸಿತ್ತು. ಅದರಂತೆ ಬ್ಯಾಂಕ್‌ನ ಶೇ 49ರಷ್ಟು ಷೇರನ್ನು ಖರೀದಿಸಬೇಕು. ಬಂಡವಾಳ ಹೂಡಿಕೆ ಮಾಡಿದ ದಿನದಿಂದ ಮೂರು ವರ್ಷಗಳವರೆಗೆ ಷೇರು ಪ್ರಮಾಣವನ್ನು ಶೇ 26ಕ್ಕಿಂತಲೂ ಕಡಿಮೆ ಮಟ್ಟಕ್ಕೆ ಇಳಿಸಬಾರದು ಎಂದು ತಿಳಿಸಿದೆ.

ADVERTISEMENT

ಖರೀದಿಗೆ ಹೆಚ್ಚಿದ ಆಸಕ್ತಿ: ಯೆಸ್‌ ಬ್ಯಾಂಕ್‌ ಷೇರುಗಳನ್ನು ಖರೀದಿಸಲು ಸ್ಥಳೀಯ ಸಿರಿವಂತರು ಮತ್ತು ಪ್ರಮುಖ ಹಣಕಾಸು ಸಂಸ್ಥೆಗಳು ಆಸಕ್ತಿ ತೋರಿಸುತ್ತಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ.

‘ಯೆಸ್‌ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ಕಂಡುಬರುತ್ತಿದೆ. ಈಗಾಗಲೇ ಪ್ರತಿ ಷೇರಿನ ಬೆಲೆ ₹ 26ಕ್ಕೆ ತಲುಪಿದೆ’ ಎಂದು ಐಐಎಫ್‌ಎಲ್‌ ಸೆಕ್ಯುರಿಟೀಸ್‌ನ ನಿರ್ದೇಶಕ ಸಂಜೀವ್‌ ಭಾಸಿನ್‌ ಹೇಳಿದ್ದಾರೆ.

‘ಐಸಿಐಸಿಐ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ ಅಲ್ಲದೆ, ಡಿಮಾರ್ಟ್‌ನ ರಾಧಾಕೃಷ್ಣನ್ ದಮನಿ, ರಾಕೇಶ್‌ ಜುಂಜುನ್‌ವಾಲಾ ಮತ್ತು ಕೆಲವು ಮ್ಯೂಚುವಲ್‌ ಫಂಡ್ ಸಂಸ್ಥೆಗಳುಆಸಕ್ತಿ ತೋರಿಸಿವೆ’ ಎಂದೂ ಹೇಳಿದ್ದಾರೆ.

‘ಬಂಡವಾಳ ಸಂಗ್ರಹಿಸಲು ವಿವಿಧ ಹೂಡಿಕೆದಾರರೊಂದಿಗೆ ಮಾತುಕತೆ ನಡೆಯುತ್ತಿದೆ’ ಎಂದು ಯೆಸ್‌ ಬ್ಯಾಂಕ್‌ನ ಆಡಳಿತಗಾರ ಪ್ರಶಾಂತ್‌ ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.