ADVERTISEMENT

ಬಡ್ಡಿ ಮೇಲೆ ಬಡ್ಡಿ ಸರಿಯಲ್ಲ: ಸುಪ್ರೀಂ

ಸುಪ್ರೀಂಕೋರ್ಟ್‌ ನಿಲುವು; ವಿಚಾರಣೆ ಆಗಸ್ಟ್‌ಗೆ ,ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 21:19 IST
Last Updated 17 ಜೂನ್ 2020, 21:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ಅವಧಿ ಸಾಲಗಳ ಕಂತು ಮರುಪಾವತಿ ಮುಂದೂಡಿಕೆಯ ಅವಧಿಯಲ್ಲಿನ ಬಡ್ಡಿ ಮೇಲೆ ಬಡ್ಡಿ ವಿಧಿಸುವುದಕ್ಕೆ ಯಾವುದೇ ಅರ್ಹತೆಯೇ ಇಲ್ಲ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ಒಂದೊಮ್ಮೆ ಕಂತು ಮರು ಪಾವತಿ ಮುಂದೂಡಿಕೆ ಅವಧಿಯನ್ನು ನಿಗದಿ ಮಾಡಿದ ಮೇಲೆ ಅದರ ಅಪೇಕ್ಷಿತ ಉದ್ದೇಶ ಈಡೇರಬೇಕು. ಈ ವಿಷಯದಲ್ಲಿ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಬೇಕು. ಪ್ರತಿಯೊಂದು ನಿರ್ಧಾರಕ್ಕೆ ಬರುವುದನ್ನು ಬ್ಯಾಂಕ್‌ಗಳ ವಿವೇಚನೆಗೆ
ಬಿಟ್ಟುಕೊಡಬಾರದು ಎಂದು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಅವರ ನೇತೃತ್ವದಲ್ಲಿನ ಪೀಠವು ಅಭಿಪ್ರಾಯಪಟ್ಟಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಪೀಠವು ಈ ನಿಲುವಿಗೆ ಬಂದಿದೆ. ಆಗ್ರಾದ ನಿವಾಸಿ ಗಜೇಂದ್ರ ಶರ್ಮಾ ಅವರು, ಸಾಲದ ಕಂತು ಪಾವತಿ ಮುಂದೂಡಿಕೆ ಅವಧಿಗೆ ಬಡ್ಡಿ ವಿಧಿಸುವ ಆರ್‌ಬಿಐ ಅಧಿಸೂಚನೆ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲು ಏರಿದ್ದಾರೆ.

ADVERTISEMENT

‘ಸಾಲ ಮರು ಪಾವತಿ ಮುಂದೂಡಿಕೆ ಅವಧಿಯಲ್ಲಿ ಸಂಪೂರ್ಣವಾಗಿ ಬಡ್ಡಿ ಮನ್ನಾ ಮಾಡುವುದು ಬ್ಯಾಂಕ್‌ಗಳ ಪಾಲಿಗೆ ಸುಲಭದ ನಿರ್ಧಾರವಾಗಿರುವುದಿಲ್ಲ. ಬ್ಯಾಂಕ್‌ಗಳು ತಮ್ಮ ಠೇವಣಿದಾರರಿಗೆ ಬಡ್ಡಿ ಪಾವತಿಸಬೇಕಾಗಿರುತ್ತದೆ. ಬಡ್ಡಿ ಮನ್ನಾ ಮಾಡುವುದರಿಂದ ಬ್ಯಾಂಕ್‌ಗಳ ಹಣಕಾಸು ಸ್ಥಿರತೆ ಗಂಡಾಂತರಕ್ಕೆ ಒಳಗಾಗಲಿದೆ. ಠೇವಣಿದಾರರ ಹಿತಾಸಕ್ತಿಯೂ ಅಪಾಯಕ್ಕೆ ಸಿಲುಕಲಿದೆ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಕೇಂದ್ರ ಸರ್ಕಾರಮತ್ತು ಆರ್‌ಬಿಐ ಪರ ವಾದ ಮಂಡಿಸಿದರು.

ಆಗಸ್ಟ್‌ಗೆ ವಿಚಾರಣೆ ಮುಂದೂಡಿದ ಪೀಠವು, ಸಾಲದ ಕಂತು ಮರುಪಾವತಿ ಕುರಿತು ಹೊಸ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸುವ ಸಂಬಂಧ ಪರಿಶೀಲಿಸಬೇಕು ಎಂದು ಭಾರತದ ಬ್ಯಾಂಕ್‌ ಸಂಘಕ್ಕೆ (ಐಬಿಎ) ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.