ADVERTISEMENT

ಹಣ ಕೊಡದಿದ್ದರೆ ವಶಕ್ಕೆ ಪಡೆಯಿರಿ: ಸೆಬಿ ಮನವಿ

₹ 62 ಸಾವಿರ ಕೋಟಿ ಪಾವತಿಸದಿದ್ದರೆ ಜೈಲಿಗೆ

ಪಿಟಿಐ
Published 20 ನವೆಂಬರ್ 2020, 21:15 IST
Last Updated 20 ನವೆಂಬರ್ 2020, 21:15 IST
ಸುಬ್ರತಾ ರಾಯ್
ಸುಬ್ರತಾ ರಾಯ್   

ನವದೆಹಲಿ: ₹ 62 ಸಾವಿರ ಕೋಟಿಯನ್ನು ತಕ್ಷಣ ಪಾವತಿಸುವಂತೆ ಸಹಾರಾ ಸಮೂಹದ ಎರಡು ಕಂಪನಿಗಳಿಗೆ ತಕ್ಷಣ ಸೂಚಿಸಬೇಕು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಈ ಮೊತ್ತ ಪಾವತಿಸುವಲ್ಲಿ ಕಂಪನಿಗಳು ವಿಫಲವಾದರೆ, ಸಮೂಹದ ಮುಖ್ಯಸ್ಥ ಸುಬ್ರತಾ ರಾಯ್ ಅವರನ್ನು ವಶಕ್ಕೆ ‍ಪಡೆಯಬೇಕು ಎಂದು ಅದು ಮನವಿಯಲ್ಲಿ ಕೋರಿದೆ.

ರಾಯ್ ಮತ್ತು ಅವರ ಎರಡು ಕಂಪನಿಗಳು (ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್ ಲಿ., ಸಹಾರಾ ಹೌಸಿಂಗ್ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಲಿ.) ತಾವು ಸಂಗ್ರಹಿಸಿದ್ದ ಹಣವನ್ನು ಬಡ್ಡಿ ಸಮೇತ ಮರಳಿಸಬೇಕು ಎಂದು ನ್ಯಾಯಾಲಯ ಈ ಹಿಂದೆ ನೀಡಿದ್ದ ಆದೇಶಗಳನ್ನು ಉಲ್ಲಂಘಿಸಿವೆ ಎಂದು ಸೆಬಿ ಹೇಳಿದೆ.

ರಾಯ್ ಮತ್ತು ಅವರ ಕಂಪನಿಗಳು ನ್ಯಾಯಾಲಯದ ಆದೇಶ ಪಾಲಿಸುವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಸೆಬಿ ದೂರಿದೆ. ₹ 62 ಸಾವಿರ ಕೋಟಿ ಮೊತ್ತವನ್ನು ರಾಯ್ ಮತ್ತು ಎರಡು ಕಂಪನಿಗಳುಸೆಬಿ–ಸಹಾರಾ ಖಾತೆಯಲ್ಲಿ ಜಮಾ ಮಾಡಬೇಕು ಎಂಬುದು ಸೆಬಿ ಆಗ್ರಹ.

ADVERTISEMENT

ಈ ಎರಡು ಕಂಪನಿಗಳು ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ವಾರ್ಷಿಕ ಶೇಕಡ 15ರಷ್ಟು ಬಡ್ಡಿ ಸೇರಿಸಿ ಹಿಂದಿರುಗಿಸಬೇಕು ಎಂದು 2012ರ ಆಗಸ್ಟ್‌ 31ರ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. 2012ರ ಆದೇಶದ ಅನುಸಾರ ಸಹಾರಾ ಸಮೂಹದ ಕಂಪನಿಗಳು ಇದುವರೆಗೆ ₹ 15,455 ಕೋಟಿಯನ್ನು ಜಮಾ ಮಾಡಿವೆ. ಈ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ರೂಪದಲ್ಲಿ ಇರಿಸಲಾಗಿದೆ ಎಂದು ಸೆಬಿ ತಿಳಿಸಿದೆ.

ರಾಯ್ ಅವರನ್ನು ಸುಪ್ರೀಂ ಕೋರ್ಟ್‌ 2014ರ ಮಾರ್ಚ್‌ 4ರಂದು ತಿಹಾರ್ ಜೈಲಿಗೆ ಕಳುಹಿಸಿತ್ತು. ಎರಡು ವರ್ಷ ಜೈಲಿನಲ್ಲಿದ್ದ ರಾಯ್ ಅವರು 2016ರ ಮೇ 6ರಂದು ಪರೋಲ್ ಮೇಲೆ ಹೊರಗೆಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.