ADVERTISEMENT

48 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್

ಎರಡು ಲಸಿಕೆಗೆ ಭಾರತ ಒಪ್ಪಿಗೆ: ಹೆಚ್ಚಿದ ಹೂಡಿಕೆ

ಪಿಟಿಐ
Published 4 ಜನವರಿ 2021, 14:44 IST
Last Updated 4 ಜನವರಿ 2021, 14:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಕೊರೊನಾ ಸೋಂಕು ತಡೆಗೆ ಎರಡು ಲಸಿಕೆಗಳನ್ನು ಬಳಸಲು ದೇಶ ಒಪ್ಪಿಗೆ ನೀಡಿದ ಸುದ್ದಿಯು ಷೇರುಪೇಟೆಗಳಲ್ಲಿ ಹೂಡಿಕೆ ಉತ್ಸಾಹ ಹೆಚ್ಚಿಸಿತು. ಇದರಿಂದಾಗಿ ಮುಂಬೈ ಷೇರುಪೇಟೆಯು ಇದೇ ಮೊದಲ ಬಾರಿಗೆ 48 ಸಾವಿರದ ಗಡಿ ದಾಟಿತು.

ರೂಪಾಯಿ ಮೌಲ್ಯವೃದ್ಧಿ, ಜಾಗತಿಕ ಮಟ್ಟದಲ್ಲಿನ ಸಕಾರಾತ್ಮಕ ಅಂಶಗಳು ಹಾಗೂ ತಯಾರಿಕಾ ವಲಯದ ಬೆಳವಣಿಗೆಯು ಸಕಾರಾತ್ಮಕ ಮಟ್ಟದಲ್ಲಿ ಇರುವುದು ಸೂಚ್ಯಂಕದ ಓಟಕ್ಕೆ ಇನ್ನಷ್ಟು ಬಲ ನೀಡಿದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 308 ಅಂಶ ಜಿಗಿತ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 48,177 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಮಧ್ಯಂತರ ವಹಿವಾಟಿನಲ್ಲಿ 48,220 ಅಂಶಗಳ ಮಟ್ಟವನ್ನು ಸೂಚ್ಯಂಕ ತಲುಪಿತ್ತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 114 ಅಂಶ ಹೆಚ್ಚಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 14,133 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಮಧ್ಯಂತರ ವಹಿವಾಟಿನಲ್ಲಿ 14,148 ಅಂಶಗಳ ದಾಖಲೆ ಮಟ್ಟಕ್ಕೆ ಏರಿಕೆಯಾಗಿತ್ತು.

ದಿನದ ವಹಿವಾಟಿನಲ್ಲಿ ಒಎನ್‌ಜಿಸಿ ಷೇರು ಶೇಕಡ 4.02ರಷ್ಟು ಗರಿಷ್ಠ ಗಳಿಕೆ ಕಂಡಿತು. ಟಿಸಿಎಸ್‌, ಎಚ್‌ಸಿಎಲ್‌ ಟೆಕ್‌, ಟೆಕ್‌ ಮಹೀಂದ್ರ, ಇನ್ಫೊಸಿಸ್‌, ಮಹೀಂದ್ರ, ಎಚ್‌ಯುಎಲ್‌, ಸನ್‌ ಫಾರ್ಮಾ ಮತ್ತು ಎಲ್‌ಆ್ಯಂಡ್‌ಟಿ ಷೇರುಗಳು ಬೆಲೆ ಹೆಚ್ಚಾಯಿತು.

ಲಸಿಕೆಗಳಿಗೆ ಅನುಮತಿ ನೀಡಿರುವುದು ಮತ್ತು ಅವುಗಳ ಬಳಕೆ ಆರಂಭಿಸುವುದು ಮಾರುಕಟ್ಟೆ ಮತ್ತು ಆರ್ಥಿಕತೆಯ ಪಾಲಿಗೆ ಶುಭಸೂಚನೆ ಎಂದು ತಜ್ಞರು ಅಭಿಪ‍್ರಾಯಪಟ್ಟಿದ್ದಾರೆ.

ಈ ತಿಂಗಳಿನಲ್ಲಿಯೇ ಲಸಿಕೆ ಬಳಕೆ ಆರಂಭವಾಗುವ ಸಾಧ್ಯತೆಯು ಗೂಳಿ ಓಟಕ್ಕೆ ವೇಗ ನೀಡಿತು. ಐ.ಟಿ. ಮತ್ತು ಲೋಹ ವಲಯದ ಷೇರುಗಳು ಅದಕ್ಕೆ ಇನ್ನಷ್ಟು ಉತ್ತೇಜನ ನೀಡಿದವು. ಹಣಕಾಸು ವಲಯದ ಕೆಲವು ಷೇರುಗಳು ಖರೀದಿಗೆ ಒಳಗಾಗಿದ್ದು ಸಹ ಸಕಾರಾತ್ಮಕವಾಗಿ ಪರಿಣಮಿಸಿತು ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಎಸ್‌. ರಂಗನಾಥನ್‌ ತಿಳಿಸಿದ್ದಾರೆ.

ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಷೇರುಗಳು ಶೇ 1.42ರವರೆಗೂ ಏರಿಕೆ ದಾಖಲಿಸಿದವು.

ಮುಖ್ಯಾಂಶಗಳು

* ವಿದೇಶಿ ಬಂಡವಾಳ ಒಳಹರಿವು

* ಎರಡು ಲಸಿಕೆ ಬಳಕೆಗೆ ಭಾರತದ ಅನುಮತಿ

* ರೂಪಾಯಿ ಮೌಲ್ಯವೃದ್ಧಿ

* ಸಕಾರಾತ್ಮಕ ಮಟ್ಟದಲ್ಲಿ ತಯಾರಿಕಾ ವಲಯದ ಬೆಳವಣಿಗೆ

ಅಂಕಿ–ಅಂಶ

1.18%:ಬ್ರೆಂಟ್‌ ತೈಲ ದರ ಏರಿಕೆ

9 ಪೈಸೆ: ಡಾಲರ್‌ ಎದುರು ರೂಪಾಯಿ ಮೌಲ್ಯ ವೃದ್ಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.