ADVERTISEMENT

ಷೇರುಪೇಟೆ ವಹಿವಾಟು ಚಂಚಲ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 18:50 IST
Last Updated 10 ಜುಲೈ 2019, 18:50 IST

ಮುಂಬೈ: ದೇಶದ ಷೇರುಪೇಟೆಗಳು ಬುಧವಾರ ಮತ್ತೆ ನಕಾರಾತ್ಮಕ ಹಾದಿ ಹಿಡಿದವು. ತೈಲ ಮತ್ತು ಅನಿಲ, ವಿದ್ಯುತ್‌, ಲೋಹ ಮತ್ತು ವಾಹನ ವಲಯದ ಷೇರುಗಳು ಸೂಚ್ಯಂಕಗಳನ್ನು ಇಳಿಕೆ ಕಾಣುವಂತೆ ಮಾಡಿದವು.

ದಿನದ ವಹಿವಾಟಿನಲ್ಲಿ 400 ಅಂಶಗಳಷ್ಟು ಏರಿಳಿತ ಕಂಡ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಕೊನೆಯಲ್ಲಿ 173 ಅಂಶ ಇಳಿಕೆ ಕಂಡು 38,557 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್ಇ) ನಿಫ್ಟಿ 58 ಅಂಶ ಇಳಿಕೆಯಾಗಿ 11,498 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ಬಜಾಜ್‌ ಫೈನಾನ್ಸ್‌ ಶೇ 4.91ರಷ್ಟು ಗರಿಷ್ಠ ನಷ್ಟ ಅನುಭವಿಸಿತು. ಟಿಸಿಎಸ್‌ನ ತ್ರೈಮಾಸಿಕದ ಅರ್ಥಿಕ ಸಾಧನೆ ಮಾರುಕಟ್ಟೆಯ ನಿರೀಕ್ಷೆಯಂತೆ ಇಲ್ಲ ಎನ್ನುವ ಕಾರಣಕ್ಕಾಗಿ ಕಂಪನಿಯಷೇರುಗಳು ಶೇ 1.16ರಷ್ಟು ಇಳಿಕೆ ಕಂಡಿವೆ.

ಟಾಟಾ ಸ್ಟೀಲ್‌, ಟಾಟಾ ಮೋಟರ್ಸ್‌, ಆ್ಯಕ್ಸಿಸ್‌ ಬ್ಯಾಂಕ್‌, ಎಲ್‌ಆ್ಯಂಡ್‌ಟಿ, ಹೀರೊ ಮೋಟೊಕಾರ್ಪ್‌, ಮಹೀಂದ್ರಾ, ಬಜಾಜ್‌ ಆಟೊ ಮತ್ತು ಎಸ್‌ಬಿಐ ಷೇರುಗಳು ಶೇ 2.94ರವರೆಗೂ ಇಳಿಕೆ ಕಂಡಿವೆ.

ರೂಪಾಯಿ ಮೌಲ್ಯ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 7 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ 68.58ರಂತೆ ವಿನಿಮಯಗೊಂಡಿತು.

ಸೂಚ್ಯಂಕ ಇಳಿಕೆ ಮತ್ತು ವಾಣಿಜ್ಯ ಸಮರದ ಪ್ರಭಾವಕ್ಕೆ ಒಳಗಾಗಿ ರೂಪಾಯಿ ಮೌಲ್ಯದಲ್ಲಿ ಇಳಿಕೆಯಾಗಿದೆ.ಬ್ರೆಂಟ್‌ ತೈಲ ದರ ಶೇ 1.79ರಷ್ಟು ಹೆಚ್ಚಾಗಿ ಒಂದು ಬ್ಯಾರೆಲ್‌ಗೆ 65.31 ಡಾಲರ್‌ಗಳಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.