ADVERTISEMENT

ರೆಪೊ ದರ ಕಡಿತ: ಸೆನ್ಸೆಕ್ಸ್ 600 ಅಂಶಗಳಷ್ಟು ಏರಿಕೆ

ಪಿಟಿಐ
Published 6 ಜೂನ್ 2025, 6:30 IST
Last Updated 6 ಜೂನ್ 2025, 6:30 IST
ಸೆನ್ಸೆಕ್ಸ್
ಸೆನ್ಸೆಕ್ಸ್    

ಮುಂಬೈ: ಆರ್‌ಬಿಐ ನಿರೀಕ್ಷೆಗೂ ಮೀರಿ ರೆಪೊ ದರದಲ್ಲಿ 50 ಮೂಲಾಂಶವನ್ನು ಕಡಿತಗೊಳಿಸಿದ ಹಿನ್ನೆಲೆಯಲ್ಲಿ ದೇಶದ ಷೇರುಪೇಟೆಯಲ್ಲಿ ಚೇತರಿಕೆ ಕಂಡುಬಂದಿದೆ.

ಆರ್‌ಬಿಐ ಘೋಷಣೆ ಬೆನ್ನಲ್ಲೇ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 591.94 ಅಂಶಗಳಷ್ಟು ಏರಿಕೆ ಕಂಡು 82,033.98ಕ್ಕೆ ಏರಿತ್ತು. ಎನ್‌ಎಸ್‌ಇ ನಿಫ್ಟಿ 205.2 ಅಂಶದಷ್ಟು ಜಿಗಿದು 24,956.10ಕ್ಕೆ ತಲುಪಿತ್ತು.

ರೆಪೊ ದರದಲ್ಲಿ ಶೇ 0.25ರಷ್ಟು ಇಳಿಕೆ ಆಗಬಹುದು ಎಂದು ತಜ್ಞರು ನಿರೀಕ್ಷಿಸಿದ್ದರು. ನಿರೀಕ್ಷೆಗೂ ಮೀರಿ ಶೇ 0.50ರಷ್ಟು ಇಳಿಕೆ ಮಾಡಲಾಗಿದೆ. ಜಿಡಿಪಿಯು 4 ವರ್ಷದ ಕನಿಷ್ಠ ಮಟ್ಟ ಶೇ 6.5ಕ್ಕೆ ಕುಸಿದಿದ್ದ ಹಿನ್ನೆಲೆಯಲ್ಲಿ ಈ ಉತ್ತೇಜನ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

ADVERTISEMENT

ಈ ಕಡಿತದ ಮೂಲಕ ರೆಪೊ ದರ ಮೂರು ವರ್ಷಗಳಲ್ಲೇ ಕಡಿಮೆ ಮಟ್ಟ ಶೇ 5.5ಕ್ಕೆ ಇಳಿದಿದೆ. ಈ ಮೂಲಕ ಗೃಹ, ಆಟೊಮೋಬೈಲ್, ಕಾರ್ಪೊರೇಟ್ ಸಾಲಗಳ ಮೇಲಿನ ಮರುಪಾವತಿ ಕಂತುಗಳಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ.

2022ರ ಆಗಸ್ಟ್‌ 5 ರಂದು ರೆಪೊ ದರವು ಶೇ 5.40ರಷ್ಟಿತ್ತು.

ಸೆನ್ಸೆಕ್ಸ್ ಕಂಪನಿಗಳ ಪೈಕಿ ಬಜಾಜ್ ಫೈನಾನ್ಸ್, ಆ್ಯಕ್ಸಿಸ್ ಬ್ಯಾಂಕ್, ಮಾರುತಿ, ಕೋಟಕ್ ಮಹೀಂದ್ರ ಬ್ಯಾಂಕ್, ಇಂಡಸ್‌ಲ್ಯಾಂಡ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫಿನ್‌ಸರ್ವ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಮುಖವಾಗಿ ಗಳಿಕೆ ಕಂಡಿವೆ.

ಸನ್ ಫಾರ್ಮಾ, ಇನ್ಫೊಸಿಸ್, ನೆಸ್ಲೆ ಮತ್ತು ಎಚ್‌ಸಿಎಲ್ ಟೆಕ್ ನಷ್ಟ ಅನುಭವಿಸಿವೆ.

ಏಷ್ಯಾದ ಷೇರು ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾದ ಕಾಸ್ಪಿ ಮತ್ತು ಜಪಾನ್‌ನ ನಿಕ್ಕಿ 225 ಸೂಚ್ಯಂಕಗಳು ಏರಿಕೆ ಕಂಡರೆ, ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಸೂಚ್ಯಂಕ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸ್ವಲ್ಪ ಕುಸಿತ ಕಂಡಿವೆ.

ಗುರುವಾರ ಅಮೆರಿಕ ಮಾರುಕಟ್ಟೆಗಳು ಕುಸಿತದೊಂದಿಗೆ ಕೊನೆಗೊಂಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.