ADVERTISEMENT

ಬಜೆಟ್ ಘೋಷಣೆಯಾಗುತ್ತಿದ್ದಂತೆ ಸೆನ್ಸೆಕ್ಸ್ 1,200 ಅಂಕ ಜಿಗಿತ

ಪಿಟಿಐ
Published 1 ಫೆಬ್ರುವರಿ 2023, 9:15 IST
Last Updated 1 ಫೆಬ್ರುವರಿ 2023, 9:15 IST
   

ಮುಂಬೈ: ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಶಾದಾಯಕವಾಗಿರುವ ಕೇಂದ್ರ ಬಜೆಟ್‌ ಮಂಡಿಸಿದ ಬೆನ್ನಲ್ಲೇ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್‌ 1,200 ಅಂಕ ಜಿಗಿತ ಕಂಡಿತು.

ಇಂಟ್ರಾ ಡೇನಲ್ಲಿ 30-ಷೇರುಗಳ ಬಿಎಸ್‌ಇ ಮಾಪಕ ಗರಿಷ್ಠ 1,223.54 ಅಂಕ ಅಥವಾ ಶೇ 2 ರಷ್ಟು ಜಿಗಿತದೊಂದಿಗೆ 60,773.44 ಅಂಕಗಳಿಗೆ ತಲುಪಿತ್ತು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ 310.05 ಅಂಕ ಗಳಿಸಿ 17,972.20 ಕ್ಕೆ ತಲುಪಿತ್ತು. ಬಳಿಕ ಕುಸಿತ ಕಂಡಿರುವ ಸೆನ್ಸೆಕ್ಸ್‌ 2.30ರವೇಳೆಗೆ 57.2 ಅಂಕ ಏರಿಕೆ ಕಂಡಿದೆ.

‘ನಿಧಾನಗತಿಯ ಆರ್ಥಿಕತೆ, ಹಣದುಬ್ಬರ ಏರಿಕೆ ಮತ್ತು ಬಡ್ಡಿದರಗಳ ‌ನಡುವೆ ಸರ್ಕಾರ ಮಂಡಿಸುವ ಜನಪ್ರಿಯ ಬಜೆಟ್‌ ಕುರಿತು ಮಾರುಕಟ್ಟೆಯು ಮಿಶ್ರ ನಿರೀಕ್ಷೆಗಳನ್ನು ಹೊಂದಿತ್ತು. ಆದಾಗ್ಯೂ, ಸರ್ಕಾರವು ಬೆಳವಣಿಗೆ ಮತ್ತು ಸ್ಥಿರತೆ ನಡುವೆ ಪರಿಪೂರ್ಣತೆ ಕಾಯ್ದುಕೊಳ್ಳುವ ಬಜೆಟ್‌ನೊಂದಿಗೆ ಅದನ್ನು ಹೊಸ ದಿಕ್ಕಿಗೆ ಕೊಂಡೊಯ್ದಿದೆ.

ADVERTISEMENT

‘ಬಂಡವಾಳ ವೆಚ್ಚ ಶೇಕಡ 33ರಷ್ಟು ಏರಿಕೆಯೊಂದಿಗೆ ₹10 ಲಕ್ಷ ಕೋಟಿಗೆ ಏರಿಕೆಯಾಗಿರುವುದು ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತಿದೆ. ಗ್ರಾಮೀಣ ಆರ್ಥಿಕತೆ ಮತ್ತು ತೆರಿಗೆದಾರರಿಗೆ ಲಾಭವಾಗುವ ಹೆಚ್ಚಿನ ಪ್ರಮಾಣದ ಯೋಜನೆಗಳು ಮತ್ತು ತೆರಿಗೆ ಪ್ರಯೋಜನಗಳು ಭಾರತದಲ್ಲಿ ಬಳಕೆ ಬೆಳವಣಿಗೆ ವೃದ್ಧಿಸುತ್ತವೆ. ನಿರೀಕ್ಷೆಗಳನ್ನು ಮೀರಿ, ಕುಟುಂಬಗಳು ಮತ್ತು ಕಾರ್ಪೊರೇಟ್‌ಗಳಿಗೆ ಪೂರಕವಾದ ಬಜೆಟ್‌. 10 ಕ್ಕೆ 10 ಅಂಕ ನೀಡಬಹುದಾದ ಬಜೆಟ್ ಆಗಿದೆ’ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಒಟ್ಟಾರೆಯಾಗಿ, ಬಜೆಟ್ ಅತ್ಯುತ್ತಮವಾಗಿದೆ. ಋಣಾತ್ಮಕತೆಯಿಂದ ದೂರ ಉಳಿದು ಆಶಾವಾದದಿಂದ ಕೂಡಿದೆ ಎಂದು ಖಾಸಗಿ ಸಂಸ್ಥೆಯ ಹೂಡಿಕೆ ಅಧಿಕಾರಿ ಸುನಿಲ್ ದಮಾನಿಯಾ ಹೇಳಿದ್ದಾರೆ.

ಐಸಿಐಸಿಐ ಬ್ಯಾಂಕ್, ಲಾರ್ಸೆನ್ ಮತ್ತು ಟೂಬ್ರೊ, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು ಏರಿಕೆ ಕಂಡಿವೆ. ಟೈಟಾನ್ ಮತ್ತು ಮಹೀಂದ್ರ ಆಂಡ್ ಮಹೀಂದ್ರಾದಂತಹ ಕೆಲ ಷೇರುಗಳು ಇಳಿಮುಖವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.