ADVERTISEMENT

ಶೇ 1ರವರೆಗೆ ಇಳಿದ ಸೆನ್ಸೆಕ್ಸ್, ನಿಫ್ಟಿ

ಜಾಗತಿಕ ಮಟ್ಟದಲ್ಲಿ ನಕಾರಾತ್ಮಕ ವಹಿವಾಟು: ವಿದೇಶ ಬಂಡವಾಳ ಹೊರಹರಿವು

ಪಿಟಿಐ
Published 28 ಸೆಪ್ಟೆಂಬರ್ 2023, 13:43 IST
Last Updated 28 ಸೆಪ್ಟೆಂಬರ್ 2023, 13:43 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ : ಜಾಗತಿಕ ಮಾರುಕಟ್ಟೆಗಳಲ್ಲಿ ನಡೆದ ನಕಾರಾತ್ಮಕ ವಹಿವಾಟಿನಿಂದಾಗಿ ದೇಶದ ಷೇರುಪೇಟೆಗಳ ಸೂಚ್ಯಂಕಗಳು ಗುರುವಾರ ಶೇ 1ರವರೆಗೂ ಇಳಿಕೆ ಕಾಣುವಂತಾಯಿತು.

ರಿಲಯನ್ಸ್ ಇಂಡಸ್ಟ್ರೀಸ್‌, ಇನ್ಫೊಸಿಸ್‌ ಮತ್ತು ಐಟಿಸಿ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದವು. ಇದರ ಜೊತೆಗೆ ವಿದೇಶಿ ಬಂಡವಾಳ ಹೊರಹರಿವು ಸಹ ದೇಶಿ ವಹಿವಾಟಿನ ಮೇಲೆ ಪರಿಣಾಮ ಬೀರಿತು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 610 ಅಂಶ ಇಳಿಕೆ ಕಂಡು 65,508 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 193 ಅಂಶ ಇಳಿಕೆಯಾಗಿ 19,523 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ADVERTISEMENT

‘ಕಚ್ಚಾ ತೈಲ ದರ ಏರಿಕೆ ಆಗಿರುವುದರಿಂದ ಹೂಡಿಕೆದಾರರು ಎಚ್ಚರಿಕೆಯಿಮದ ವಹಿವಾಟು ನಡೆಸಿದರು. ಕಚ್ಚ ತೈಲ ದರವು ಬ್ಯಾರಲ್‌ಗೆ 90 ಡಾಲರ್‌ಗಿಂತಲೂ ಹೆಚ್ಚಿನ ಮಟ್ಟದಲ್ಲಿಯೇ ಇದ್ದರೆ ಹಣದುಬ್ಬರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಕಾರ್ಯಾಚರಣಾ ಗಳಿಕೆಯನ್ನೂ ತಗ್ಗಿಸಲಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

‘ಬಡ್ಡಿದರ ಗರಿಷ್ಠ ಮಟ್ಟದಲ್ಲಿ ಇರುವುದು ಹಾಗೂ ಅಮೆರಿಕದ ಬಾಂಡ್ ಗಳಿಕೆ ಹೆಚ್ಚಾಗುತ್ತಿರುವುದು ವಿದೇಶಿ ಸಾಂಸ್ಥಿಕ ಹೂಡಿಕೆದಾರರನ್ನು ಮಾರಾಟ ಮಾಡುವಂತೆ ಪ್ರಭಾವ ಬೀರುತ್ತಿವೆ’ ಎಂದು ಅವರು ತಿಳಿಸಿದ್ದಾರೆ.

ಟೆಕ್‌ ಮಹೀಂದ್ರ ಷೇರು ಮೌಲ್ಯ ಶೇ 4.59ರಷ್ಟು ಹೆಚ್ಚಿನ ನಷ್ಟ ಕಂಡಿತು. ಏಷ್ಯನ್ ಪೇಂಟ್ಸ್, ವಿಪ್ರೊ, ಕೋಟಕ್‌ ಮಹೀಂದ್ರ ಷೇರು ಮೌಲ್ಯ ಸಹ ಕಡಿಮೆ ಆಯಿತು.

ಬಿಎಸ್‌ಇ ಮಿಡ್‌ಕ್ಯಾಪ್‌ ಶೇ 1.19 ಮತ್ತು ಸ್ಮಾಲ್‌ಕ್ಯಾಪ್‌ ಶೇ 0.34ರಷ್ಟು ಇಳಿಕೆ ಕಂಡಿದೆ. ವಲಯವಾರು ಐ.ಟಿ. ಶೇ 1.84, ಎಫ್‌ಎಂಸಿಜಿ ಶೇ 1.74, ಟೆಕ್‌ ಶೇ 1.49ರಷ್ಟು ಇಳಿಕೆ ಕಂಡಿತು.

₹2.95 ಲಕ್ಷ ಕೋಟಿ ನಷ್ಟ

ನವದೆಹಲಿ: ಮುಂಬೈ ಷೇರುಪೇಟೆಯಲ್ಲಿ ನಡೆದ ನಕಾರಾತ್ಮಕ ವಹಿವಾಟಿನಿಂದಾಗಿ ಗುರುವಾರ ಹೂಡಿಕೆದಾರರ ಸಂಪತ್ತು ಮೌಲ್ಯದಲ್ಲಿ ₹2.95 ಲಕ್ಷ ಕೋಟಿ ಕರಗಿತು. ಇದರಿಂದಾಗಿ ಬಿಎಸ್‌ಇನ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು ₹316.65 ಲಕ್ಷ ಕೋಟಿಗೆ ಇಳಿಕೆ ಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.