ADVERTISEMENT

ಷೇರುಪೇಟೆ | ಸೆನ್ಸೆಕ್ಸ್‌ 526 ಅಂಶ ಏರಿಕೆ

ಮಾರುತಿ ಷೇರಿನ ಮೌಲ್ಯ ಏರಿಕೆ

ಪಿಟಿಐ
Published 27 ಮಾರ್ಚ್ 2024, 15:36 IST
Last Updated 27 ಮಾರ್ಚ್ 2024, 15:36 IST
   

ಮುಂಬೈ: ಹೂಡಿಕೆದಾರರು ಬ್ಯಾಂಕ್‌, ತೈಲ ಮತ್ತು ಆಟೊ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದರಿಂದ ದೇಶದ ಷೇರುಪೇಟೆಗಳಲ್ಲಿ ಬುಧವಾರ ಸಕಾರಾತ್ಮಕ ವಹಿವಾಟು ನಡೆಯಿತು.‌

ಭಾರತದ ಜಿಡಿಪಿ ಬೆಳವಣಿಗೆ ಬಗೆಗಿನ ಕ್ರೆಡಿಟ್‌ ರೇಟಿಂಗ್‌ ಸಂಸ್ಥೆಗಳ ಮುನ್ನೋಟ ಕೂಡ ಸೂಚ್ಯಂಕಗಳ ಏರಿಕೆಗೆ ಕಾರಣವಾಗಿದೆ. ಗುರುವಾರ ಅಮೆರಿಕದ ಜಿಡಿಪಿ ದತ್ತಾಂಶ ಬಿಡುಗಡೆಯಾಗಲಿದೆ. ಮುಂದಿನ ವಾರ ಆರ್‌ಬಿಐನ ಹಣಕಾಸು ನೀತಿ ಸಮಿತಿಯ ವರದಿ ಪ್ರಕಟವಾಗಲಿದೆ. ಇದರ ಮೇಲೆ ಹೂಡಿಕೆದಾರರು ದೃಷ್ಟಿ ನೆಟ್ಟಿರುವುದರಿಂದ ಸೂಚ್ಯಂಕಗಳು ಏರಿಕೆಯ ಹಾದಿ ಹಿಡಿದಿವೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 526 ಅಂಶ (ಶೇ 0.73) ಏರಿಕೆ ಕಂಡು 72,996 ಅಂಶಗಳಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು. ದಿನದ ವಹಿವಾಟಿನಲ್ಲಿ 668 ಅಂಶ ಏರಿಕೆಯಾಗಿ, 73,128 ಅಂಶಗಳಿಗೆ ತಲುಪಿತ್ತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 118 ಅಂಶ (ಶೇ 0.54) ಏರಿಕೆ ಕಂಡು 22,123 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ಬಜಾಜ್‌ ಫೈನಾನ್ಸ್‌, ಟೈಟನ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಇಂಡಸ್‌ಇಂಡ್‌ ಬ್ಯಾಂಕ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಲಾರ್ಸನ್‌ ಆ್ಯಂಡ್‌ ಟೊರ್ಬೊ ಷೇರುಗಳು ಏರಿಕೆ ಕಂಡಿವೆ. ವಿಪ್ರೊ, ಎಚ್‌ಸಿಎಲ್‌ ಟೆಕ್ನಾಲಜೀಸ್‌, ನೆಸ್ಲೆ, ಟಿಸಿಎಸ್‌ ಮತ್ತು ಟಾಟಾ ಮೋಟರ್ಸ್‌ ಷೇರಿನ ಮೌಲ್ಯ ಇಳಿಕೆಯಾಗಿದೆ. 

ಮಾರುತಿ ಷೇರು ಏರಿಕೆ

ಬಿಎಸ್ಇಯಲ್ಲಿ ಮಾರುತಿ ಸುಜುಕಿ ಕಂಪನಿಯ ಷೇರಿನ ಮೌಲ್ಯ ಶೇ 2.40ರಷ್ಟು ಏರಿಕೆಯಾಗಿದ್ದು, ಪ್ರತಿ ಷೇರಿನ ಬೆಲೆ ₹12,550ಕ್ಕೆ ತಲುಪಿದೆ. ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯವು ಶೇ 2.52ರಷ್ಟು ಏರಿಕೆಯಾಗಿದ್ದು, ಪ್ರತಿ ಷೇರಿನ ಬೆಲೆ ₹12,560 ಆಗಿದೆ.‌

ದಿನದ ವಹಿವಾಟಿನಲ್ಲಿ ಕಂಪನಿಯ ಒಟ್ಟು ಎಂ–ಕ್ಯಾಪ್‌ ₹4 ಲಕ್ಷ ಕೋಟಿಗೆ ಮುಟ್ಟಿತ್ತು. ವಹಿವಾಟಿನ ಅಂತ್ಯಕ್ಕೆ ₹3.94 ಲಕ್ಷ ಕೋಟಿ ಆಗಿದೆ.

₹20 ಲಕ್ಷ ಕೋಟಿ ದಾಟಿದ ರಿಲಯನ್ಸ್‌ ಎಂ–ಕ್ಯಾ‍ಪ್

ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರಿನ ಮೌಲ್ಯವು ಶೇ 4ರಷ್ಟು ಏರಿಕೆಯಾಗಿದ್ದು ಒಂದೇ ದಿನ ಕಂಪನಿಯ ಮಾರುಕಟ್ಟೆ ಬಂಡವಾಳಕ್ಕೆ (ಎಂ–ಕ್ಯಾಪ್) ₹70039 ಕೋಟಿ ಸೇರ್ಪಡೆಯಾಗಿದೆ. ಕಂಪನಿಯ ಒಟ್ಟು ಎಂ–ಕ್ಯಾಪ್ ₹20.21 ಲಕ್ಷ ಕೋಟಿ ದಾಟಿದೆ. 

ಫೆಬ್ರುವರಿ 13ರಂದು ನಡೆದ ವಹಿವಾಟಿನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಮಾರುಕಟ್ಟೆ ಬಂಡವಾಳವು ಮೊದಲ ಬಾರಿಗೆ ₹20 ಲಕ್ಷ ಕೋಟಿ ದಾಟಿತ್ತು. ಈ ಸಾಧನೆಗೆ ಮಾಡಿದ ಭಾರತದ ಪ್ರಥಮ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಬಿಎಸ್‌ಇಯಲ್ಲಿ ಷೇರಿನ ಮೌಲ್ಯ ಶೇ 3.60ರಷ್ಟು ಏರಿಕೆಯಾಗಿದ್ದು ಪ್ರತಿ ಷೇರಿನ ಬೆಲೆ ₹2987.85ಕ್ಕೆ ತಲುಪಿದೆ. ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯ ಶೇ 3.48ರಷ್ಟು ಏರಿಕೆಯಾಗಿದ್ದು ಪ್ರತಿ ಷೇರಿನ ಬೆಲೆ ₹2983.75ಕ್ಕೆ ಮುಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.