ADVERTISEMENT

ದಾಖಲೆಯ ಓಟ ಮುಂದುವರಿಸಿದ ನಿಫ್ಟಿ, ಸೆನ್ಸೆಕ್ಸ್

ಪಿಟಿಐ
Published 2 ಸೆಪ್ಟೆಂಬರ್ 2021, 14:56 IST
Last Updated 2 ಸೆಪ್ಟೆಂಬರ್ 2021, 14:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮುಂಬೈ: ದೇಶದ ಷೇರು ಮಾರುಕಟ್ಟೆಗಳಲ್ಲಿ ಗುರುವಾರ ಗೂಳಿಯ ಓಟ ಕಂಡುಬಂತು. ಬುಧವಾರ ಇಳಿಕೆಯ ಹಾದಿಯಲ್ಲಿ ಸಾಗಿದ್ದ ಷೇರುಪೇಟೆಗಳು ಗುರುವಾರ ಮತ್ತೆ ಏರುಗತಿಯನ್ನು ಹಿಡಿದವು.

ಐ.ಟಿ., ಎಫ್‌ಎಂಸಿಜಿ ಮತ್ತು ಬ್ಯಾಂಕ್ ಷೇರುಗಳ ಖರೀದಿಯು ಜೋರಾಗಿ ನಡೆದ ಪರಿಣಾಮವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 514 ಅಂಶ ಏರಿಕೆ ಕಂಡಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 157 ಅಂಶ ಏರಿಕೆ ಕಂಡಿತು.

ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 57,852 ಅಂಶಗಳಲ್ಲಿ, ನಿಫ್ಟಿಯು ಇದುವರೆಗಿನ ಗರಿಷ್ಠ ಮಟ್ಟವಾದ 17,234 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿದವು. ಬಿಎಸ್‌ಇ ಮಿಡ್‌ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕೂಡ ಏರಿಕೆ ಕಂಡವು.

ADVERTISEMENT

ಗುರುವಾರದ ವಹಿವಾಟಿನ ಕೊನೆಯಲ್ಲಿ, ಬಿಎಸ್‌ಇಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ಇದುವರೆಗಿನ ಗರಿಷ್ಠ ಮಟ್ಟವಾದ ₹ 252.68 ಲಕ್ಷ ಕೋಟಿಗೆ ಏರಿಕೆ ಆಗಿದೆ. ಹೂಡಿಕೆದಾರರ ಸಂಪತ್ತು ₹ 2.53 ಲಕ್ಷ ಕೋಟಿಯಷ್ಟು ಜಾಸ್ತಿ ಆಗಿದೆ.

‘ಬುಧವಾರ ತುಸು ಕುಸಿತ ಕಂಡಿದ್ದ ಮಾರುಕಟ್ಟೆಗಳು ಗುರುವಾರ ಮತ್ತೆ ಏರಿಕೆಯ ಹಾದಿಗೆ ಮರಳಿವೆ’ ಎಂದು ಕೋಟಕ್ ಸೆಕ್ಯುರಿಟೀಸ್‌ನ ಶ್ರೀಕಾಂತ್ ಚೌಹಾಣ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.