ADVERTISEMENT

ಮತ್ತೆ ಇಳಿಮುಖ ಹಾದಿಯಲ್ಲಿ ಸೂಚ್ಯಂಕ

ಷೇರುಪೇಟೆ ಮೇಲೆ ದೇಶಿ, ವಿದೇಶಿ ವಿದ್ಯಮಾನಗಳ ಪರಿಣಾಮ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 20:00 IST
Last Updated 13 ಆಗಸ್ಟ್ 2019, 20:00 IST
   

ಮುಂಬೈ: ದೇಶಿ ಮತ್ತು ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ದೇಶದ ಷೇರುಪೇಟೆಗಳಲ್ಲಿ ಸೂಚ್ಯಂಕಗಳು ಮಂಗಳವಾರ ಮತ್ತೆ ಇಳಿಮುಖ ಹಾದಿ ಹಿಡಿದವು.

ಅಮೆರಿಕ–ಚೀನಾದ ವಾಣಿಜ್ಯ ಸಮರವು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಸೃಷ್ಟಿಸಿದೆ. ದೇಶದಲ್ಲಿ, ಮಂದಗತಿಯ ಆರ್ಥಿಕ ಪ್ರಗತಿಯಿಂದಾಗಿ ಗ್ರಾಹಕರ ಖರೀದಿ ಸಾಮರ್ಥ್ಯ ಕಡಿಮೆಯಾಗಿದೆ. ಇದರಿಂದ ಹಲವು ವಲಯಗಳ ಮಾರಾಟದಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬರುತ್ತಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರನ್ನು (ಎಫ್‌ಪಿಐ) ಸರ್ಚಾರ್ಜ್‌ ಆತಂಕದಿಂದ ಹೊರತರಲು ಕೇಂದ್ರ ಸರ್ಕಾರ ಯಾವುದೇ ಗಟ್ಟಿ ನಿರ್ಧಾರ ಪ್ರಕಟಿಸಿಲ್ಲ. ಈ ಎಲ್ಲ ಬೆಳವಣಿಗೆಗಳಿಂದಾಗಿ ದೇಶದ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯುವಂತಾಗಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ADVERTISEMENT

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 623 ಅಂಶ ಇಳಿಕೆಯಾಗಿ 36,958 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಹಿಂದಿನ ವಾರದಲ್ಲಿ ಗುರುವಾರ ಮತ್ತು ಶುಕ್ರವಾರ ಸಂವೇದಿ ಸೂಚ್ಯಂಕ ಒಟ್ಟಾರೆ 891 ಅಂಶಗಳಷ್ಟು ಏರಿಕೆ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 183 ಅಂಶ ಇಳಿಕೆಯಾಗಿ 10,925 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಗರಿಷ್ಠ ನಷ್ಟ: ದಿನದ ವಹಿವಾಟಿನಲ್ಲಿ ಯೆಸ್‌ ಬ್ಯಾಂಕ್‌, ಮಹೀಂದ್ರಾ, ಬಜಾಜ್‌ ಫೈನಾನ್ಸ್‌, ಭಾರ್ತಿ ಏರ್‌ಟೆಲ್‌, ಎಚ್‌ಡಿಎಫ್‌ಸಿ, ಮಾರುತಿ, ಟಾಟಾ ಸ್ಟೀಲ್‌ ಮತ್ತು ಎಲ್‌ಅ್ಯಂಡ್‌ಟಿ ಕಂಪನಿಗಳ ಷೇರುಗಳು ಶೇ 10.35ರವರೆಗೆ ಇಳಿಕೆ ಕಂಡಿವೆ.

ಜಾಗತಿಕ ವಾಣಿಜ್ಯ ಸಮರದ ಆತಂಕಕ್ಕೆ ಒಳಗಾಗಿ ಏಷ್ಯಾದ ಮಾರುಕಟ್ಟೆಗಳ ವಹಿವಾಟು ಇಳಿಮುಖವಾಗಿತ್ತು. ಹಾಂಗ್‌ಸೆಂಗ್‌ ಶೇ 2.10, ಶಾಂಘೈ ಕಾಂಪೊಸಿಟ್‌ ಇಂಡೆಕ್ಸ್‌ ಶೇ 0.63, ನಿಕೇಯ್‌ ಶೇ 1.11ರಷ್ಟು ಇಳಿಕೆ ಕಂಡಿವೆ.

ಆರ್‌ಐಎಲ್‌ ಗಳಿಕೆ ಹೆಚ್ಚಳ

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌) ಷೇರುಗಳು ದಿನದ ವಹಿವಾಟಿ ನಲ್ಲಿ ಶೇ 9.72ರಷ್ಟು ಏರಿಕೆ ಕಂಡಿವೆ. ಪ್ರತಿ ಷೇರಿನ ಬೆಲೆ
₹ 1,275ಕ್ಕೆ ತಲುಪಿತು.

ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಕಂಪನಿಯ ಬಂಡವಾಳ ಮೌಲ್ಯ ₹ 71,638 ಕೋಟಿ ಹೆಚ್ಚಾಗಿದ್ದು, ಒಟ್ಟಾರೆ ಮೌಲ್ಯವು ₹ 8.08 ಲಕ್ಷ ಕೋಟಿಗೆ ತಲುಪಿದೆ. ಬಿಎಸ್‌ಇನಲ್ಲಿ 20.92 ಲಕ್ಷ ಮತ್ತು ಎನ್‌ಎಸ್‌ಇನಲ್ಲಿ 4.79 ಲಕ್ಷ ಷೇರುಗಳು ವಹಿವಾಟು ನಡೆಸಿದವು.

‘ಕಂಪನಿಯ ಷೇರಿನ ಬೆಲೆಯು ಶೀಘ್ರವೇ ₹ 1,300ಕ್ಕೆ ತಲುಪಲಿದೆ. ಕಂಪನಿಯು ಘೋಷಿಸಿರುವ ಕ್ರಮಗಳಿಂದಾಗಿ ವಹಿವಾಟುದಾರರು ಷೇರುಗಳ ಖರೀದಿಗೆ ಮುಗಿಬಿದ್ದಿದ್ದಾರೆ. 12 ತಿಂಗಳಿನಲ್ಲಿ ಷೇರಿನ ಬೆಲೆ ₹ 2 ಸಾವಿರವನ್ನೂ ದಾಟಲಿದೆ’ ಎಂದು ಕ್ಯಾಪಿಟಲ್‌ ಏಮ್‌ ಕಂಪನಿಯ ಸಂಶೋಧನಾ ಮುಖ್ಯಸ್ಥ ರೊಮೇಶ್‌ ತಿವಾರಿ ಹೇಳಿದ್ದಾರೆ.

ಕರಗಿದ ಹೂಡಿಕೆದಾರರ ಸಂಪತ್ತು

ಸೂಚ್ಯಂಕಗಳು ಇಳಿಕೆ ಕಂಡಿರುವುದರಿಂದ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 2.22 ಲಕ್ಷ ಕೋಟಿಗಳಷ್ಟು ಕರಗಿದೆ.‌

ಷೇರುಪೇಟೆಯ ಬಂಡವಾಳ ಮೌಲ್ಯವು ಶುಕ್ರವಾರದ ₹ 141.68 ಲಕ್ಷ ಕೋಟಿಯಿಂದ ₹ 139.46 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.