ADVERTISEMENT

ಷೇರುಪೇಟೆಗೆ ಶಕ್ತಿವರ್ಧಕ ನೀಡಿದ ದಾಸ್‌

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 19:03 IST
Last Updated 17 ಏಪ್ರಿಲ್ 2020, 19:03 IST
   

ಮುಂಬೈ: ಆರ್ಥಿಕತೆಗೆ ಚೇತರಿಕೆ ನೀಡಲು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್ ಅವರು ಹಲವಾರು ಉತ್ತೇಜನಾ ಕ್ರಮಗಳನ್ನು ಘೋಷಿಸಿದ್ದರಿಂದ ಬ್ಯಾಂಕಿಂಗ್‌, ಇಂಧನ ಮತ್ತು ಐ.ಟಿ ಕಂಪನಿ ಷೇರುಗಳ ಬೆಲೆ ಏರಿಕೆಯಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರ 986 ಅಂಶಗಳಷ್ಟು ಚೇತರಿಕೆ ದಾಖಲಿಸಿತು.

ದಿನದ ವಹಿವಾಟು ಆರಂಭದಲ್ಲಿನ 1,116 ಅಂಶಗಳ ಹೆಚ್ಚಳವನ್ನು ಕಾಯ್ದುಕೊಳ್ಳಲು ವಿಫಲವಾದ ಸೂಚ್ಯಂಕವು, ದಿನದ ಅಂತ್ಯಕ್ಕೆ 986 ಅಂಶಗಳ ಏರಿಕೆ ಕಂಡು 31,588 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 273 ಅಂಶ ಹೆಚ್ಚಳ ಕಂಡು 9,266 ಅಂಶಗಳಲ್ಲಿ ವಹಿವಾಟು ಅಂತ್ಯ ಕಂಡಿತು.

ಆ್ಯಕ್ಸಿಸ್‌ ಬ್ಯಾಂಕ್‌ ಷೇರು ಬೆಲೆ (ಶೇ 13) ಗರಿಷ್ಠ ಮಟ್ಟದ ಏರಿಕೆ ದಾಖಲಿಸಿತು. ನಂತರದ ಸ್ಥಾನದಲ್ಲಿ ಐಸಿಐಸಿಐ ಬ್ಯಾಂಕ್‌, ಇಂಡಸ್‌ಇಂಡ್‌ ಬ್ಯಾಂಕ್‌, ಮಾರುತಿ, ಟಿಸಿಎಸ್‌, ಕೋಟಕ್‌ ಬ್ಯಾಂಕ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳಿದ್ದವು.

ADVERTISEMENT

ಬ್ಯಾಂಕ್‌ ಬಡ್ಡಿ ದರಕ್ಕೆ ತೀವ್ರವಾಗಿ ಸ್ಪಂದಿಸುವ ಬ್ಯಾಂಕಿಂಗ್‌, ಹಣಕಾಸು, ವಾಹನ ತಯಾರಿಕಾ ಮತ್ತು ರಿಯಾಲ್ಟಿ ವಲಯದ ಷೇರುಗಳ ಬೆಲೆ ಗರಿಷ್ಠ ಶೇ 6.83ರವರೆಗೆ ಹೆಚ್ಚಳ ಕಂಡವು.

ರೂಪಾಯಿ ಚೇತರಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಬೆಲೆ 48 ಪೈಸೆ ಚೇತರಿಕೆ ಕಂಡು ₹ 76.39ಕ್ಕೆ ಏರಿಕೆ ದಾಖಲಿಸಿತು.

ಕಚ್ಚಾ ತೈಲ ಬೆಲೆ ಏರಿಕೆ: ಜಾಗತಿಕ ಕಚ್ಚಾ ತೈಲ ಬೆಲೆಯ ಮಾನದಂಡವಾಗಿರುವ ಬ್ರೆಂಟ್‌ನ ವಾಯಿದಾ ಬೆಲೆಯು ಪ್ರತಿ ಬ್ಯಾರಲ್‌ಗೆ 27.84 ಡಾಲರ್‌ಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.