ADVERTISEMENT

ಇನ್ಫೊಸಿಸ್‌ ಗಳಿಕೆ: ಷೇರುಪೇಟೆ ಚೇತರಿಕೆ

ಪಿಟಿಐ
Published 16 ಜುಲೈ 2020, 13:39 IST
Last Updated 16 ಜುಲೈ 2020, 13:39 IST
ಬಿಎಸ್‌ಇ
ಬಿಎಸ್‌ಇ   

ಮುಂಬೈ: ಇನ್ಫೊಸಿಸ್‌ ಕಂಪನಿಯ ಷೇರು ಗಳಿಕೆಯು ದೇಶದ ಷೇರುಪೇಟೆಗಳಲ್ಲಿ ಗುರುವಾರ ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿತು.

ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇನ್ಫೊಸಿಸ್‌ ಆರ್ಥಿಕ ಸಾಧನೆಯು ಮಾರುಕಟ್ಟೆ ನಿರೀಕ್ಷೆಗಿಂತಲೂ ಉತ್ತಮವಾಗಿದೆ. ಇದರಿಂದ ಕಂಪನಿಯ ಷೇರು ಶೇ 9.56ರವರೆಗೂ ಹೆಚ್ಚಾಯಿತು. ಹೀಗಾಗಿ ಜಾಗತಿಕ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ ಕಂಡುಬಂದರೂ, ದೇಶಿ ಷೇರುಪೇಟೆಗಳಲ್ಲಿ ಸೂಚ್ಯಂಕಗಳು ಏರಿಕೆ ಕಾಣುವಂತಾಯಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 420 ಅಂಶ ಹೆಚ್ಚಾಗಿ 36,471 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 121 ಅಂಶ ಹೆಚ್ಚಾಗಿ 10,739 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಇನ್ಫೊಸಿಸ್‌ ಒಳಗೊಂಡು ಐ.ಟಿ ಕಂಪನಿಗಳ ಷೇರುಗಳ ಮೌಲ್ಯ ಹೆಚ್ಚಳವು ಹೂಡಿಕೆ ಚಟುವಟಿಕೆಯನ್ನು ಉತ್ತೇಜಿಸಿತು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಚೀನಾದ ಜಿಡಿಪಿ 2020ರ ಎರಡನೇ ತ್ರೈಮಾಸಿಕದಲ್ಲಿ ಶೇ 3.2ರಷ್ಟು ಬೆಳವಣಿಗೆ ಕಂಡಿದೆ. ಇದು ಹೂಡಿಕೆದಾರರನ್ನು ನಿರಾಸೆಗೊಳಿಸಿದ್ದು, ಶಾಂಘೈ ಷೇರುಪೇಟೆಯು ಶೇ 4.50ರಷ್ಟು ಇಳಿಕೆ ಕಂಡಿದೆ. ಇದು ಹಾಂಗ್‌ಕಾಂಗ್‌, ಟೋಕಿಯೊ ಷೇರುಪೇಟೆಗಳ ಮೇಲೆಯೂ ಪರಿಣಾಮ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.