ಮುಂಬೈ/ನವದೆಹಲಿ (ಪಿಟಿಐ): ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 36 ಪೈಸೆ ಇಳಿಕೆಯಾಗಿದೆ. ರೂಪಾಯಿ ಮೌಲ್ಯವು ಡಾಲರ್ ಎದುರು ₹88.47ಕ್ಕೆ ಕುಸಿದಿದೆ. ಇದು ರೂಪಾಯಿಯ ಸಾರ್ವಕಾಲಿಕ ಕನಿಷ್ಠ ಮಟ್ಟ.
ಅಮೆರಿಕ ಮತ್ತು ಭಾರತದ ನಡುವೆ ಸುಂಕದ ವಿಚಾರವಾಗಿ ಉಂಟಾಗಿರುವ ಬಿಕ್ಕಟ್ಟು ದೇಶದ ಕರೆನ್ಸಿ ಮೇಲೆ ಒತ್ತಡ ಸೃಷ್ಟಿಸಿದೆ. ವಿದೇಶಿ ಬಂಡವಾಳದ ಹೊರಹರಿವು ಹೂಡಿಕೆದಾರರ ಭಾವನೆ ಮೇಲೆ ಪರಿಣಾಮ ಬೀರಿರುವುದು ಮತ್ತು ಕಚ್ಚಾ ತೈಲ ಬೆಲೆ ಏರಿಕೆಯು ರೂಪಾಯಿ ಮೌಲ್ಯ ಇಳಿಕೆಗೆ ಕಾರಣವಾಗಿವೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಷೇರು ಸೂಚ್ಯಂಕ ಏರಿಕೆ: ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 123 ಅಂಶ ಹೆಚ್ಚಳವಾಗಿ, 81,548ಕ್ಕೆ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 32 ಅಂಶ ಏರಿಕೆಯಾಗಿ, 25,005ಕ್ಕೆ ಕೊನೆಗೊಂಡಿದೆ.
ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಮಾತುಕತೆ ಶೀಘ್ರ ನಡೆಯುವ ನಿರೀಕ್ಷೆ ಹೆಚ್ಚಿದೆ. ಇದು ಷೇರುಪೇಟೆ ಸೂಚ್ಯಂಕಗಳ ಏರಿಕೆಗೆ ಕಾರಣವಾಯಿತು ಎಂದು ಜಿಯೊಜಿತ್ ಇನ್ವೆಸ್ಟ್‌ಮೆಂಟ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.