ADVERTISEMENT

ಭೌಗೋಳಿಕ ಸೂಚಿಕೆ ಪಡೆದ ಉತ್ಪನ್ನಮಾರಾಟಕ್ಕೆ ಪ್ರತ್ಯೇಕ ನೀತಿ ಚಿಂತನೆ

​ಪ್ರಜಾವಾಣಿ ವಾರ್ತೆ
Published 3 ಮೇ 2019, 20:24 IST
Last Updated 3 ಮೇ 2019, 20:24 IST
ಸತೀಶ್‌
ಸತೀಶ್‌   

ಮಂಗಳೂರು: ‘ದೇಶದಲ್ಲಿ ಅತಿ ಹೆಚ್ಚು ಉತ್ಪನ್ನಗಳಿಗೆ ಭೌಗೋಳಿಕ ಸೂಚಿಕೆ (ಜಿಐ) ಪಡೆದಿರುವ ಕರ್ನಾಟಕದಲ್ಲಿ ಈ ಉತ್ಪನ್ನಗಳ ಮಾರುಕಟ್ಟೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತ್ಯೇಕ ನೀತಿ ರೂಪಿಸಲಾಗುವುದು. ಈ ಮೂಲಕ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಯೂ ಕರ್ನಾಟಕಕ್ಕೆ ಸಲ್ಲಲಿದೆ’ ಎಂದು ವಿಶ್ವೇಶ್ವರಯ್ಯ ಟ್ರೇಡ್‌ ಪ್ರೊಮೋಷನ್‌ ಸೆಂಟರ್‌ನ (ವಿಟಿಪಿಸಿ) ವ್ಯವಸ್ಥಾಪಕ ನಿರ್ದೇಶಕ ಎಸ್‌. ಆರ್‌. ಸತೀಶ ಹೇಳಿದರು.

ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಲ್ಲಿ ಶುಕ್ರವಾರ ರಫ್ತುದಾರರೊಂದಿಗೆ ಸಂವಾದ ನಡೆಸಿದ ಬಳಿಕ ಅವರು ಮಾಧ್ಯಮದವರ ಜತೆ ಮಾತನಾಡಿದರು.

‘ಕರ್ನಾಟಕದಲ್ಲಿ 45 ಉತ್ಪನ್ನಗಳಿಗೆ ಭೌಗೋಳಿಕ ಸೂಚಿಕೆ ದೊರೆತಿದೆ. ಮಹಾರಾಷ್ಟ್ರದಲ್ಲಿ 35 ಉತ್ಪನ್ನಗಳಿಗೆ ಸೂಚಿಕೆ ದೊರೆತಿದೆ. ಈ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ವಿಟಿಪಿಸಿಯು ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಭೌಗೋಳಿಕ ಸೂಚಿಕೆ ಪಡೆದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಪ್ರತ್ಯೇಕ ಮಳಿಗೆಗಳನ್ನು ತೆರೆಯುವ ಬಗ್ಗೆ ಚಿಂತನೆ ನಡೆಸುತ್ತಿದೆ’ ಎಂದರು.

ADVERTISEMENT

‘ನೀತಿ ನಿರೂಪಣೆಗೆ ಪೂರಕವಾಗಿ, ಕಲಾವಿದರು, ಕೃಷಿಕರನ್ನು ಭೇಟಿಯಾಗಿ ಉತ್ಪನ್ನಗಳ ಮಾರುಕಟ್ಟೆಗೆ ಅಗತ್ಯವಿರುವ ಅಂಶಗಳನ್ನು ಚರ್ಚಿಸಲಾಗುವುದು. ಹೊಸ ನೀತಿಯು ಭೌಗೋಳಿಕಸೂಚಿಕೆ ಪಡೆದ ಉತ್ಪನ್ನಗಳ ಮಾರುಕಟ್ಟೆ ತಂತ್ರದತ್ತ ಹೆಚ್ಚು ಗಮನ ಹರಿಸಲಿದೆ’ ಎಂದು ಅವರು ಹೇಳಿದರು.

‘ಈ ಸೂಚಿಕೆ ಪಡೆದ ಅನೇಕ ಉತ್ಪನ್ನಗಳನ್ನು ತಯಾರಿಸುವ ಕೌಶಲವನ್ನು ಆಯಾ ಪ್ರದೇಶದ ಜನರಿಗೆ ತಿಳಿಸುವುದೂ ಮುಖ್ಯವಾಗಿದೆ. ಉದಾಹರಣೆಗೆ ಉಡುಪಿ ಸೀರೆಗಳಿಗೆ ಭೌಗೋಳಿಕ ಸೂಚಿಕೆ ದೊರೆತಿದ್ದರೂ, ಕೌಶಲ ಬಲ್ಲವರು ಕಡಿಮೆ. ಮೊಳಕಾಲ್ಮುರು ಸೀರೆ, ಗುಳೇದಗುಡ್ಡದ ಬುಟ್ಟದಂಚುಸೀರೆ, ಕಿನ್ಹಾಳ ಕಲೆ ಮುಂತಾದ ಕಲಾಪ್ರಕಾರಗಳನ್ನು ಬೆಳೆಸಲು ತರಬೇತಿ ಮತ್ತು ಪ್ರೋತ್ಸಾಹ ಅಗತ್ಯ. ಕೃಷಿ ಕ್ಷೇತ್ರದಲ್ಲಿ ಉಡುಪಿ ಮಲ್ಲಿಗೆ, ಮಟ್ಟುಗುಳ್ಳ, ನಂಜನಗೂಡು ರಸಬಾಳೆ, ಕೊಡಗಿನ ಕಿತ್ತಳೆ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಪ್ರಮಾಣ ಪತ್ರಗಳನ್ನು ನೀಡುವ ನಿಟ್ಟಿನಲ್ಲಿಯೂ ಕೆಲಸಗಳು ಆಗಬೇಕಾಗಿವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.