ADVERTISEMENT

ನಿಲ್ಲದ ಷೇರುಪೇಟೆ ಕುಸಿತ

ಪಿಟಿಐ
Published 17 ಮಾರ್ಚ್ 2020, 17:19 IST
Last Updated 17 ಮಾರ್ಚ್ 2020, 17:19 IST
ಹೂಡಿಕೆದಾರರ ಸಂಪತ್ತು ಕರಗಿದೆ
ಹೂಡಿಕೆದಾರರ ಸಂಪತ್ತು ಕರಗಿದೆ   

ಮುಂಬೈ: ‘ಕೊರೊನಾ–2’ ವೈರಸ್‌, ಜಾಗತಿಕ ಆರ್ಥಿಕತೆಯಲ್ಲಿ ಸೃಷ್ಟಿಸಿರುವ ಹಿಂಜರಿತ ಭೀತಿಗೆ ವಿಶ್ವದ ಪ್ರಮುಖ ಷೇರುಪೇಟೆಗಳಲ್ಲಿನ ವಹಿವಾಟು ಕುಸಿತ ಮಂಗಳವಾರವೂ ಮುಂದುವರೆದಿದೆ.

ಮುಂಬೈ ಷೇರುಪೇಟೆಯು ದಿನದ ಆರಂಭದಲ್ಲಿ ಕಂಡಿದ್ದ ಗಳಿಕೆಯನ್ನು ವಹಿವಾಟು ಅಂತ್ಯದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ದಿಢೀರನೆ ಕಳೆದುಕೊಂಡಿತು. ವಹಿವಾಟಿನ ಒಂದು ಹಂತದಲ್ಲಿ 1,653 ಅಂಶಗಳ ಚೇತರಿಕೆ ಕಂಡಿದ್ದ ಸಂವೇದಿ ಸೂಚ್ಯಂಕವು, ಅಂತಿಮವಾಗಿ 811 ಅಂಶಗಳಿಗೆ ಎರವಾಗಿ 30,579 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ 230 ಅಂಶಗಳಿಗೆ ಎರವಾಗಿ 8,967 ಅಂಶಗಳಿಗೆ ಇಳಿಯಿತು.

ನ್ಯೂಯಾರ್ಕ್‌ ಷೇರುಪೇಟೆಯು (ವಾಲ್‌ಸ್ಟ್ರೀಟ್‌), 1987ರ ಅಕ್ಟೋಬರ್‌ನ ‘ಕಪ್ಪು ಸೋಮವಾರ’ದ ನಂತರದ ಅತಿದೊಡ್ಡ ಕುಸಿತ ಕಂಡಿದ್ದರಿಂದ ಜಾಗತಿಕ ಪೇಟೆಗಳು ಅದರ ಪ್ರಭಾವಕ್ಕೆ ಒಳಗಾಗಿ ಮುಗ್ಗರಿಸಿವೆ. ಅಮೆರಿಕದ ಫೆಡರಲ್‌ ರಿಸರ್ವ್‌, ಬಡ್ಡಿ ದರ ಕಡಿತ ಮಾಡಿರುವುದು ಹೂಡಿಕೆದಾರರಲ್ಲಿ ಖರೀದಿ ಉತ್ಸಾಹ ಮೂಡಿಸುವಲ್ಲಿ ವಿಫಲವಾಗಿದೆ. ಕೇಂದ್ರೀಯ ಬ್ಯಾಂಕ್‌ಗಳು ಕೈಗೊಂಡಿರುವ ಹಣಕಾಸು ಉತ್ತೇಜನಾ ಕ್ರಮಗಳು ಸೀಮಿತ ಪ್ರಭಾವ ಬೀರುತ್ತಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ವಿದೇಶಿ ನಿಧಿಗಳ ನಿಲ್ಲದ ಹೊರ ಹರಿವು ಮತ್ತು ಅಮೆರಿಕದ ಡಾಲರ್‌ ಎದುರಿನ ರೂಪಾಯಿ ದರ ಕುಸಿತದ ಕಾರಣಕ್ಕೆ ದೇಶಿ ಷೇರುಪೇಟೆಗಳಲ್ಲಿಯೂ ಮಾರಾಟ ಒತ್ತಡ ಮುಂದುವರೆದಿದೆ.

ಕರಗಿದ ಸಂಪತ್ತು: ಸೋಮವಾರ ಮತ್ತು ಮಂಗಳವಾರದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಒಟ್ಟಾರೆ ₹ 9.74 ಲಕ್ಷ ಕೋಟಿಗಳಷ್ಟು ಕರಗಿದೆ. ಜನವರಿಯಿಂದ ಇಲ್ಲಿಯವರೆಗೆ ಮಾರುಕಟ್ಟೆ ಮೌಲ್ಯವು ₹ 36.3 ಲಕ್ಷ ಕೋಟಿ ಕಡಿಮೆಯಾಗಿದೆ. ಮಂಗಳವಾರ ಪೇಟೆಯ ಒಟ್ಟಾರೆ ಮೌಲ್ಯವು ₹ 119 ಲಕ್ಷ ಕೋಟಿಗೆ ಇಳಿದಿದೆ.

ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾದಾಗಲ್ಲೆಲ್ಲ ಚಿನ್ನವು ‘ಹೂಡಿಕೆಯ ಸುರಕ್ಷಿತ ಸ್ವರ್ಗ’ವಾಗಿ ಪರಿಣಮಿಸಿರುತ್ತದೆ. ಷೇರುಪೇಟೆಗಳಲ್ಲಿನ ಕುಸಿತದ ಕಾರಣಕ್ಕೆ ಹೂಡಿಕೆದಾರರು ಬಳಿಯಲ್ಲಿ ನಗದು ಇರಿಸಿಕೊಳ್ಳಲು ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಚಿನ್ನದ ಬೇಡಿಕೆ ತಗ್ಗಿದೆ. ಬೆಲೆ ಅಗ್ಗವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.