ಬೆಳಗಾವಿ: ಈ ಚಳಿಗಾಲದಲ್ಲಿ ಕುರಿ ಉಣ್ಣೆಯಿಂದ ತಯಾರಿಸಿದ ಕಂಬಳಿ, ಬ್ಲಾಂಕೆಟ್‌ಗಳಿಗೆ ಬೇಡಿಕೆ ಹೆಚ್ಚಿದೆ. ವಿವಿಧ ಸಹಕಾರಿ ಸಂಘಗಳಲ್ಲಿ ಉತ್ಪಾದನೆಗೆ ಕಾರ್ಮಿಕರು, ಸಲಕರಣೆಗಳೂ ಲಭ್ಯವಿವೆ. ಆದರೆ, ಬೇಡಿಕೆಯಷ್ಟು ಕುರಿ ಉಣ್ಣೆಯೇ ಸಿಗುತ್ತಿಲ್ಲ. ಇದರಿಂದ ಉತ್ಪಾದನೆಗೆ ಹಿನ್ನಡೆ ಆಗಿದೆ.
‘ನಮ್ಮಲ್ಲಿ ₹3 ಕೋಟಿ ಮೊತ್ತದ ಕಂಬಳಿ, ಬ್ಲಾಂಕೆಟ್ ಉತ್ಪಾದಿಸಲು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ), ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಗುರಿ ನೀಡಿದೆ. 2024ರ ಏಪ್ರಿಲ್ 1ರಿಂದ ಡಿಸೆಂಬರ್ ಅಂತ್ಯದವರೆಗೆ ₹2.75 ಕೋಟಿಯ ಉತ್ಪನ್ನ ಸಿದ್ಧಪಡಿಸಿದ್ದೇವೆ’ ಎಂದು ತಾಲ್ಲೂಕಿನ ಶಿಂಧೊಳ್ಳಿಯ ಕನಕದಾಸ ಕುರಿ ಸಂಗೋಪನಾ ಮತ್ತು ಉಣ್ಣೆ ಉತ್ಪಾದನೆ ಸಹಕಾರಿ ಸಂಘದ ಅಧ್ಯಕ್ಷ ಯಲ್ಲಪ್ಪ ಶಹಾಪುರಕರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅವಕಾಶ ಸಿಕ್ಕರೆ ವಾರ್ಷಿಕ ₹4 ಕೋಟಿಯವರೆಗೆ ಉತ್ಪನ್ನ ಸಿದ್ಧಪಡಿಸಬಹುದು. ಆದರೆ, ಹೆಚ್ಚಿನ ಉತ್ಪಾದನೆಗೆ ಕುರಿ ಉಣ್ಣೆ ಸಿಗುತ್ತಿಲ್ಲ. ಇದರಿಂದ ನಿಗದಿತ ಕಾಲಾವಧಿಯಲ್ಲಿ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ’ ಎಂದರು.
‘ನಮ್ಮ ಸಂಘದಲ್ಲಿರುವ 400ಕ್ಕೂ ಹೆಚ್ಚು ಸದಸ್ಯರು ತಾವು ಸಾಕಿದ ಕುರಿಗಳಿಂದ ವರ್ಷಕ್ಕೆ ಎರಡು ಬಾರಿ ಉಣ್ಣೆ ಕತ್ತರಿಸಿ ನೀಡುತ್ತಾರೆ. ಹಾವೇರಿ, ಹುಬ್ಬಳ್ಳಿ, ಗದಗ, ಹೂವಿನಹಡಗಲಿ ಮತ್ತಿತರ ಕಡೆಯಿಂದ ಉಣ್ಣೆಯನ್ನು ಪ್ರತಿ ಕೆ.ಜಿಗೆ ₹ 50 ರಿಂದ ₹60ರ ದರದಲ್ಲಿ ಖರೀದಿಸುತ್ತೇವೆ. ಹೊರ ರಾಜ್ಯದವರು ಕೆ.ಜಿಗೆ ₹70 ರಿಂದ ₹80ರ ದರದಲ್ಲಿ ಕರ್ನಾಟಕದ ಕುರಿ ಉಣ್ಣೆ ಖರೀದಿಸುತ್ತಾರೆ. ಇದರಿಂದ ಅಭಾವವಾಗಿದೆ’ ಎಂದು ಸಂಘದ ಕಾರ್ಯದರ್ಶಿ ಮಲ್ಲೇಶಪ್ಪ ಅನಿಗೋಳಕರ ಹೇಳಿದರು.
‘ಕಳೆದ 9 ತಿಂಗಳಲ್ಲಿ ಸಂಘದಲ್ಲಿ ಸಿದ್ಧಪಡಿಸಿದ ₹2.75 ಕೋಟಿಯ ಉತ್ಪನ್ನದಲ್ಲಿ ₹1.20 ಕೋಟಿ ಮೊತ್ತದ ಕಂಬಳಿಗಳೇ ಇವೆ. ಪ್ರತಿ ಕಂಬಳಿ ದರ ₹1,700 ರಿಂದ ₹6 ಸಾವಿರದವರೆಗೆ, ಬ್ಲಾಂಕೆಟ್ ದರ ₹7,300 ಇದೆ. ಸಂಘದ ಮಳಿಗೆಗಳು, ವಿವಿಧ ಪ್ರದರ್ಶನಗಳಲ್ಲಿ ಶೇ 35 ರಿಯಾಯಿತಿ ದರದಲ್ಲಿ ಮಾರುತ್ತೇವೆ. ಗ್ರಾಹಕರಿಗೆ ನೀಡಿದ ರಿಯಾಯಿತಿ ಹಣವನ್ನು ಆಯೋಗ ಮತ್ತು ಮಂಡಳಿ ಭರಿಸುತ್ತದೆ. ಕುರಿ ಉಣ್ಣೆ ಕೊರತೆ, ಸರ್ಕಾರಗಳಿಂದ ಸಕಾಲಕ್ಕೆ ಸೌಲಭ್ಯ ಸಿಗದ ಕಾರಣ ಬೇಡಿಕೆ ಪೂರೈಸಲು ಆಗುತ್ತಿಲ್ಲ’ ಎಂದು ಸಂಘದ ಮಾಜಿ ಕಾರ್ಯದರ್ಶಿ ಸಿದ್ದಪ್ಪ ಸಾಯನ್ನವರ ತಿಳಿಸಿದರು.
ಕುರಿಗಾಹಿಗಳಿಗಾಗಿ ರೂಪಿಸಲಾದ ಸರ್ಕಾರಿ ಯೋಜನೆಗಳು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಕೆಲವರು ವೃತ್ತಿಯಿಂದ ವಿಮುಖರಾಗಿದ್ದಾರೆ. ಕೆಲವರು ಉಣ್ಣೆ ಇಲ್ಲದ ತಳಿಯ ಕುರಿ ಸಾಕುತ್ತಿದ್ದಾರೆ. ಇದರಿಂದ ಉಣ್ಣೆ ಕೊರತೆಯಾಗಿದೆ.ಮಲ್ಲೇಶಪ್ಪ ಅನಿಗೋಳಕರ ಕಾರ್ಯದರ್ಶಿ ಶಿಂಧೊಳ್ಳಿಯ ಕನಕದಾಸ ಕುರಿ ಸಂಗೋಪನಾ ಮತ್ತು ಉಣ್ಣೆ ಉತ್ಪಾದನೆ ಸಹಕಾರಿ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.