ರಿಯಲ್ ಎಸ್ಟೇಟ್ ಕ್ಷೇತ್ರದ ಕಂಪನಿ, ಶ್ರೀ ಲೋಟಸ್ ಡೆವಲಪರ್ಸ್ ಷೇರಿನ ಬೆಲೆ ₹250ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಅಂದಾಜಿಸಿದೆ.
ಕಂಪನಿಯು ಪ್ರಸ್ತುತ ಒಟ್ಟು 13.5 ಲಕ್ಷ ಚದರ ಅಡಿ ವಿಸ್ತೀರ್ಣದ ಎಂಟು ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಕಂಪನಿಯು ಮುಂಬೈನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಪ್ರೀಮಿಯಂ ಮೈಕ್ರೊ ಮಾರುಕಟ್ಟೆಯತ್ತ ಪ್ರತ್ಯೇಕವಾಗಿ ತನ್ನ ಗಮನ ಕೇಂದ್ರೀಕರಿಸಿದೆ. ನಗರ ಪ್ರದೇಶದ ಎಲ್ಲೆಡೆ ಐಷಾರಾಮಿ ವಸತಿ ಯೋಜನೆಗಳನ್ನು ನಿರ್ಮಿಸುತ್ತಿದೆ.
ಈಗಾಗಲೇ ನಾಲ್ಕು ಯೋಜನೆಗಳು ಪೂರ್ಣಗೊಂಡಿದ್ದು, ಐದು ವಸತಿ ಯೋಜನೆಗಳು ನಿರ್ಮಾಣ ಹಂತದಲ್ಲಿವೆ. ಈ ಯೋಜನೆಗಳ ಮೌಲ್ಯ ₹1,900 ಕೋಟಿಯಿಂದ ₹2 ಸಾವಿರ ಕೋಟಿ ಆಗಲಿದೆ. ಇದರ ಜೊತೆಗೆ ಎಂಟು ವಸತಿ ಯೋಜನೆಗಳನ್ನು ಹೊಂದಿದೆ.
ವಸತಿ ಯೋಜನೆಗಳ ಜೊತೆಗೆ 2 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ವಾಣಿಜ್ಯ ಉದ್ದೇಶದ ಮೂರು ಕಟ್ಟಡವನ್ನು ಅಭಿವೃದ್ಧಿಪಡಿಸಿ, ಮಾರಾಟ ಮಾಡುವ ಉದ್ದೇಶ ಹೊಂದಿದೆ. ಇದರ ಮೌಲ್ಯ ₹3 ಸಾವಿರ ಕೋಟಿಯಿಂದ ₹3,500 ಕೋಟಿವರೆಗೆ ಇರಲಿದೆ.
2024–25ರ ಆರ್ಥಿಕ ವರ್ಷದಿಂದ 2027–28ರವರೆಗಿನ ಅವಧಿಯಲ್ಲಿ ಶೇ 58ರಷ್ಟು ವರಮಾನ ಬೆಳವಣಿಗೆ (ಸಿಎಜಿಆರ್) ಇರುವ ನಿರೀಕ್ಷೆ ಎಂದು ಮೋತಿಲಾಲ್ ಓಸ್ವಾಲ್ ಅಂದಾಜಿಸಿದೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ ಶ್ರೀ ಲೋಟಸ್ ಡೆವಲಪರ್ಸ್ ಷೇರಿನ ಬೆಲೆ ₹194.95 ಆಗಿತ್ತು.
(ಬ್ರೋಕರೇಜ್ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.