ADVERTISEMENT

ಏಕ ಕಂತಿನ ವಿಮೆ ಸುರಕ್ಷತೆ

ಜೆ.ಸಿ.ಜಾಧವ
Published 23 ಜೂನ್ 2020, 19:30 IST
Last Updated 23 ಜೂನ್ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನಿರ್ದಿಷ್ಟ ಮೊತ್ತದ ಬ್ಯಾಂಕ್ ಠೇವಣಿಯಂತೆ ಏಕ ಕಂತಿನಲ್ಲಿ ಹಣ ಪಾವತಿಸಿ ವಿಮೆ ಸೌಲಭ್ಯ ಪಡೆಯುವ ಪಾಲಿಸಿಗಳು ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗುತ್ತವೆ. ಹಿರಿಯರಿಗೆ ಖಚಿತ ಮೊತ್ತದ ಪಿಂಚಣಿಯ ಭರವಸೆಯನ್ನೂ ನೀಡುತ್ತವೆ.

ಕೈಯಲ್ಲೊಂದಿಷ್ಟು ಹಣ ಕೂಡಿದರೆ ಪ್ರತಿಯೊಬ್ಬರಿಗೂ ಥಟ್ಟನೇ ಹೊಳೆಯುವ ವಿಚಾರ ಬ್ಯಾಂಕ್‌ನಲ್ಲಿ ಠೇವಣಿ ಇರಿಸುವುದು ಅಥವಾ ಚಿನ್ನ ಖರೀದಿಸುವುದು. ಬ್ಯಾಂಕ್ ಠೇವಣಿಯೇ ಉಳಿತಾಯದ ಮೊದಲ ಮೆಟ್ಟಿಲು ಹಾಗೂ ಉಳಿತಾಯದ ಅತಿ ಸುರಕ್ಷಿತ ವಿಧಾನವೂ ಆಗಿದೆ. ನಿರ್ದಿಷ್ಟ ಮೊತ್ತವನ್ನು ನಿರ್ದಿಷ್ಟ ಅವಧಿಯವರೆಗೆ ಖಚಿತಪಡಿಸಿದ ಬಡ್ಡಿ ದರದೊಂದಿಗೆ ನಿರ್ದಿಷ್ಟ ಆದಾಯ ಸಿಗುವುದರಿಂದ ಬ್ಯಾಂಕ್ ಠೇವಣಿಯು ಸುರಕ್ಷಿತವಾಗಿದೆ. ಬ್ಯಾಂಕ್ ಠೇವಣಿಯು ನಿರ್ದಿಷ್ಟ ಮೊತ್ತದವರೆಗೆ ಮಾತ್ರ ಖಚಿತತೆ ನೀಡುತ್ತದೆ. ಇತ್ತೀಚಿನವರೆಗೆ ₹ 1 ಲಕ್ಷದ ಮೊತ್ತದವರೆಗೆ ಮಾತ್ರ ಖಾತರಿ ಇತ್ತು. ಕೇಂದ್ರ ಸರ್ಕಾರವು ಈಗ ₹ 5 ಲಕ್ಷ ವರೆಗಿನ ಮೊತ್ತಕ್ಕೆ ಖಾತರಿ ಹೆಚ್ಚಿಸಿದೆ. ಅಂದರೆ ₹ 5 ಲಕ್ಷದ ಮೊತ್ತಕ್ಕೆ ಆರ್‌ಬಿಐನ ಅಂಗಸಂಸ್ಥೆಯಾಗಿರುವ ಠೇವಣಿ ವಿಮೆ ಮತ್ತು ಸಾಲ ಖಾತರಿ ಸಂಸ್ಥೆಯು (Deposit Insurance and Credit Guarantee –DICG) ಖಾತರಿ ನೀಡುತ್ತದೆ.

ಠೇವಣಿ ಇರಿಸಿದ ಬ್ಯಾಂಕ್ ಒಂದು ವೇಳೆ ದಿವಾಳಿಯಾದರೆ ಆ ಬ್ಯಾಂಕ್‌ನ ಶಾಖೆಗಳಲ್ಲಿನ ಗ್ರಾಹಕರ ಚಾಲ್ತಿ ಖಾತೆ, ಆರ್.ಡಿ., ಉಳಿತಾಯ ಖಾತೆ ಹಾಗೂ ಠೇವಣಿ ಎಲ್ಲಾ ಸೇರಿ ₹ 5 ಲಕ್ಷವರೆಗಿನ ಮೊತ್ತಕ್ಕೆ ಮಾತ್ರ ಖಾತರಿ ನೀಡುತ್ತದೆ. ಅಂದರೆ ₹ 5ಲಕ್ಷಗಳ ಮೊತ್ತದ ವರೆಗೆ ಮಾತ್ರ ಸಾಲ ಖಾತರಿ ಸಂಸ್ಥೆಯು ವಿಮೆ ಮಾಡಿಸಿರುತ್ತದೆ. ₹ 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ವಿಮೆ ಇರುವುದಿಲ್ಲ. ಹಾಗಾಗಿ ಹೆಚ್ಚಿನ ಮೊತ್ತಕ್ಕೆ ಖಾತರಿ ಇರುವುದಿಲ್ಲ.

ADVERTISEMENT

ಇನ್ನು ₹ 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ಹೂಡಿಕೆ ಮಾಡುವ ಪ್ರತಿಯೊಂದು ರೂಪಾಯಿಗೆ ಕೇಂದ್ರ ಸರ್ಕಾರವೇ ಖಚಿತ ಹಾಗೂ ಕಾನೂನು ಬದ್ಧ ಭರವಸೆ ನೀಡುತ್ತದೆ. 1956ರ ಎಲ್‌ಐಸಿ. ಕಾಯ್ದೆಯ ಸೆಕ್ಷನ್ 37ರ ಅಡಿಯಲ್ಲಿ ಕೇಂದ್ರ ಸರ್ಕಾರವು ವಿಮಾ ಮೊತ್ತ ಹಾಗೂ ಕ್ರೋಡೀಕೃತ ಬೋನಸ್ ಮೊತ್ತಕ್ಕೆ ಕೇಂದ್ರ ಸರ್ಕಾರವು ಖಚಿತ ಭರವಸೆ ನೀಡುತ್ತದೆ.

ಬ್ಯಾಂಕ್ ಠೇವಣಿಯಂತೆ ಕನಿಷ್ಠ ಮೊತ್ತವನ್ನು (ಅಂದರೆ ₹ 24 ಸಾವಿರಕ್ಕೂ ಹೆಚ್ಚು) ಏಕ ಕಂತಿನಲ್ಲಿ ಪಾವತಿಸಿ ವಿಮೆ ಪಡೆಯುವ ಸೌಲಭ್ಯಗಳು ಎಲ್‌ಐಸಿಯಲ್ಲಿ ಇವೆ. ಇಂತಹ ಪಾಲಿಸಿಗಳು ಮಕ್ಕಳ ಉನ್ನತ ಶಿಕ್ಷಣಕ್ಕೆ ಹಾಗೂ ಹಿರಿಯರಿಗೆ ಖಚಿತ ಮೊತ್ತದ ಪಿಂಚಣಿಯ ಭರವಸೆ ನೀಡುತ್ತವೆ.

ಸಿಂಗಲ್ ಪ್ರೀಮಿಯಂ ಎಂಡೊಮೆಂಟ್ (ಪ್ಲ್ಯಾನ್‌ ಸಂ.917): ಹೆಸರೇ ಸೂಚಿಸುವಂತೆ ಏಕ ಕಂತಿನಲ್ಲಿ ಪಾವತಿಸಿ ವಿಮೆ ಸೌಲಭ್ಯ ಪಡೆಯಬಹುದು. ಈ ಪಾಲಿಸಿಯನ್ನು 3 ತಿಂಗಳ ಮಗುವಿಂದ ಪ್ರಾರಂಭವಾಗಿ 65 ವರ್ಷ ವಯಸ್ಸಿನವರೂ ಪಡೆಯಬಹುದು.

ಇದೇ ಪಾಲಿಸಿಯಡಿ ಮಗುವಿನ 6ನೇ ತಿಂಗಳಿಗೆ ಒಂದೇ ಕಂತಿನಲ್ಲಿ ₹ 2,16,687 ಪಾವತಿಸಿದರೆ, ಆಗ ₹ 50 ಸಾವಿರ ವಿಮಾ ಮೊತ್ತದ 8 ಪಾಲಿಸಿಗಳು (₹ 4 ಲಕ್ಷ ವಿಮೆ ಮೊತ್ತ) ದೊರೆಯುತ್ತವೆ. ಈ ಯೋಜನೆಯಡಿ ಮಕ್ಕಳ 18ನೇ ವರ್ಷದಿಂದ 25ನೇ ವಯಸ್ಸಿನವರೆಗೂ ಪ್ರತಿ ವರ್ಷ ಅವರ ವಿದ್ಯಾಭ್ಯಾಸಕ್ಕಾಗಿ 8 ಕಂತುಗಳಲ್ಲಿ ಒಟ್ಟು ₹ 8,97,100 ಪಡೆಯಬಹುದು.

18ನೇ ವರ್ಷಕ್ಕೆ ₹ 93,150, 19ನೇ ವರ್ಷಕ್ಕೆ ₹ 96,200, 20ನೇ ವರ್ಷಕ್ಕೆ ₹ 99,500, 21ನೇ ವರ್ಷಕ್ಕೆ ₹ 1,08,550, 22ನೇ ವರ್ಷಕ್ಕೆ ₹ 1,13,600, 23ನೇ ವರ್ಷಕ್ಕೆ ₹ 1,21,150, 24ನೇ ವರ್ಷಕ್ಕೆ ₹ 1,28,700, 25ನೇ ವರ್ಷಕ್ಕೆ ₹ 1,36,250– ಹೀಗೆ 8 ವರ್ಷಗಳ ಅವಧಿಯಲ್ಲಿ ಒಟ್ಟು ₹ 8,97,100 ಸಿಗಲಿದೆ. ಈ ಉದಾಹರಣೆಯೇ ಅಂತಿಮವಲ್ಲ. ಜನರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಚ್ಚು ಕಡಿಮೆ ಮೊತ್ತವನ್ನು ಹೂಡಿಕೆ ಮಾಡಲು ಅವಕಾಶವಿದೆ.

ಬಿಮಾ ಬಚತ್ (ಪ್ಲ್ಯಾನ್‌ ಸಂಖ್ಯೆ 916): ಈ ಪಾಲಿಸಿಯು ಏಕ ಕಂತಿನಲ್ಲಿ ಹಣ ಪಾವತಿಸಿ ಪ್ರತಿ 3 ವರ್ಷಕ್ಕೊಮ್ಮೆ ವಿಮಾ ಮೊತ್ತದ ಶೇ 15ರಷ್ಟು ಮೊತ್ತ ಮರಳಿ ಪಡೆಯಬಹುದು. ವಿಮಾ ಅವಧಿಯ ನಂತರ ಪಾವತಿಸಿದ ಏಕ ಕಂತಿನ ಮೊತ್ತ ಹಾಗೂ ಲಾಯಲ್ಟಿ ಎಡಿಷನ್ ಸೇರಿ ಮ್ಯಾಚುರಿಟಿ ಮೊತ್ತ ದೊರೆಯುತ್ತದೆ.

ಉದಾಹರಣೆ: ವಯಸ್ಸು: 15 ವರ್ಷ. ವಿಮಾ ಮೊತ್ತ: ₹ 1 ಲಕ್ಷ ಅವಧಿ: 15 ವರ್ಷ ಪ್ರಿಮಿಯಂ: ₹ 80,627 ಒಂದೇ ಕಂತು.

3 ವರ್ಷಗಳ ನಂತರ ₹ 15,000, 6 ವರ್ಷಗಳ ನಂತರ ₹ 15,000, 9 ವರ್ಷಗಳ ನಂತರ ₹ 15,000 ಮತ್ತು 12 ವರ್ಷಗಳ ನಂತರ ₹ 15,000 ಪಾವತಿಸಲಾಗುತ್ತದೆ. 15ನೇ ವರ್ಷಕ್ಕೆ, ಪಾವತಿಸಿದ ಏಕ ಕಂತು ₹ 80,627 + ₹ 30,000 (ಲಾಯಲ್ಟಿ ಎಡಿಷನ್ ಅಂದಾಜು) ಒಟ್ಟು ₹ 1,07,155 ನೀಡಲಾಗುತ್ತದೆ. ಒಟ್ಟಾರೆ ಪಾಲಿಸಿ ಅವಧಿಯಲ್ಲಿ ₹ 1,67,155 ನೀಡಿದಂತಾಗುತ್ತದೆ. ಪಾಲಿಸಿಯ ಅವಧಿಯುದ್ದಕ್ಕೂ ₹ 1 ಲಕ್ಷದ ವಿಮಾ ರಕ್ಷಣೆಯೂ ಇರುತ್ತದೆ. ವಿಮಾ ಅವಧಿಯಲ್ಲಿ ಮೃತರಾದರೆ ವಿಮಾ ಮೊತ್ತ ಹಾಗೂ ಲಾಯಲ್ಟಿ ಎಡಿಷನ್ ಮೊತ್ತ ನೀಡಲಾಗುವುದು.

ಜೀವನ ಶಾಂತಿ (ಪ್ಲ್ಯಾನ್‌ ಸಂ.850):ನೆಮ್ಮದಿಯ ಜೀವನಕ್ಕಾಗಿ ಜೀವನ ಶಾಂತಿ ಪಾಲಿಸಿ ಹೇಳಿ ಮಾಡಿಸಿದಂತಿದೆ. ಅಂದರೆ ಏಕ ಕಂತಿನಲ್ಲಿ ಪಾವತಿಸಿ, ಪ್ರತಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ತಮ್ಮ ಇಚ್ಛೆಗೆ ಅನುಗುಣವಾಗಿ ಪಿಂಚಣಿ ಪಡೆಯಬಹುದು. ಕನಿಷ್ಠ 30 ವರ್ಷ ಪೂರ್ಣಗೊಳಿಸಿದವರು ಈ ಪಾಲಿಸಿ ಪಡೆಯಬಹುದು. ಗರಿಷ್ಠ 85 ವರ್ಷ ವಯಸ್ಸಿನವರೂ ಈ ಪಾಲಿಸಿ ಖರೀದಿಸಬಹುದು.

ಏಕ ಕಂತಿನಲ್ಲಿ ಪಾವತಿಸಿ ತಕ್ಷಣದಿಂದ ಅಥವಾ ಮುಂದೂಡಿದ ವರ್ಷಗಳಿಂದ ಪಿಂಚಣಿ ಪಡೆಯಬಹುದು. ಪಾಲಿಸಿದಾರರ ಜೀವಮಾನದ
ವರೆಗೆ ನಿರ್ದಿಷ್ಟ ಹಾಗೂ ಖಚಿತಪಡಿಸಿದ ಪಿಂಚಣಿ ದೊರೆಯುತ್ತದೆ. ಪಾಲಿಸಿ ಅವಧಿಯಲ್ಲಿ ಮೃತಪಟ್ಟರೆ ಪಾಲಿಸಿದಾರರು ಹೂಡಿಕೆ ಮಾಡಿದ ಮೊತ್ತ ಅಂದರೆ ಪರ್ಚೇಜ್ ಪ್ರೈಸ್ ನಾಮಿನಿಗೆ ದೊರೆಯುತ್ತದೆ. ಪಿಂಚಣಿ ಪಡೆಯುವಲ್ಲಿ 10 ವಿಧಾನಗಳಿವೆ. ಅವುಗಳಲ್ಲಿ ‘ಎಫ್’ ಆಯ್ಕೆ ಉತ್ತಮವಾದುದು.

ಹೀಗೆ ಏಕ ಕಂತಿನಲ್ಲಿ ಪಾವತಿಸಿ ಉತ್ತಮ ಸೌಲಭ್ಯಗಳೊಂದಿಗೆ ಆಕರ್ಷಕ ಹಾಗೂ ನಿರ್ದಿಷ್ಠ ಮತ್ತು ಖಚಿತ ಮೊತ್ತವನ್ನು ಪಡೆಯುವ ಯೋಜನೆಗಳು ಎಲ್‌ಐಸಿಯಲ್ಲಿ ಇವೆ. ಈ ಯೋಜನೆಗಳಲ್ಲಿ ಹಣ ತೊಡಗಿಸಲು ಗರಿಷ್ಠ ಮಿತಿ ಇಲ್ಲ. ಪ್ರತಿಯೊಬ್ಬರೂ ತಮ್ಮ ಹಣಕಾಸು ಪರಿಸ್ಥಿತಿಗೆ ಅನುಗುಣವಾಗಿ ಹಣ ತೊಡಗಿಸಬಹುದು.

ವಿಮೆ ಮೊತ್ತ: ಕನಿಷ್ಠ: ₹ 50,000. ಗರಿಷ್ಠ: ಮಿತಿ ಇಲ್ಲ.

ಪಾಲಿಸಿ ಅವಧಿ: 10 ವರ್ಷದಿಂದ 25 ವರ್ಷ

ಉದಾಹರಣೆ: ಮಗುವಿನ ವಯಸ್ಸು: 6 ತಿಂಗಳು. ಅವಧಿ: 25 ವರ್ಷ ವಿಮೆ ಮೊತ್ತ: ₹ 50,000. ಪ್ರೀಮಿಯಂ: ₹ 24,153ರಂತೆ ಅನ್ನು ಏಕ ಕಂತಿನಲ್ಲಿ ಪಾವತಿಸಬೇಕು.

25 ವರ್ಷಗಳ ನಂತರ ಮ್ಯಾಚುರಿಟಿ ಮೊತ್ತ ಈ ರೀತಿ ಸಿಗಲಿದೆ

ವಿಮೆ ಮೊತ್ತ ₹ 50,000 + ₹ 63,750 (ಬೋನಸ್) + ₹ 22,500 (ಅಂತಿಮ ಹೆಚ್ಚುವರಿ ಬೋನಸ್)

ಒಟ್ಟು ₹ 1,36,250 ಮ್ಯಾಚುರಿಟಿ ಮೊತ್ತವು ದೊರೆಯುತ್ತದೆ. (ಬೋನಸ್= ಈಗಿನ ಪ್ರಸ್ತುತ ದರ ಪರಿಗಣಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.