ADVERTISEMENT

ಸ್ಮಾರ್ಟ್‌ಫೋನ್‌: ಚೀನಾ ಅಧಿಪತ್ಯ

ವಿಶ್ವನಾಥ ಎಸ್.
Published 29 ಜನವರಿ 2019, 19:45 IST
Last Updated 29 ಜನವರಿ 2019, 19:45 IST
   

ಜಗತ್ತಿನ ಹಲವು ಭಾಗಗಳಲ್ಲಿ ಸ್ಮಾರ್ಟ್‌ಫೋನ್‌ ಮಾರಾಟ ಇಳಿಮುಖವಾಗಿದ್ದರೆ ಭಾರತದಲ್ಲಿ ಮಾತ್ರ ಏರಿಕೆಯಾಗುತ್ತಲೇ ಇದೆ. ಹೊಸ ಹ್ಯಾಂಡ್‌ಸೆಟ್‌ಗಳ ಬಿಡುಗಡೆಯಲ್ಲಿಯೂ ಗಣನೀಯ ಏರಿಕೆ ಕಂಡು ಬರುತ್ತಿದೆ. ದೇಶಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಚೀನಾ, ತೈವಾನ್‌ ಮತ್ತು ದಕ್ಷಿಣ ಕೊರಿಯಾದ ಫೋನ್‌ ತಯಾರಿಕಾ ಕಂಪನಿಗಳ ಮಧ್ಯೆ ಪೈಪೋಟಿ ನಡೆದಿದೆ.

ಕಡಿಮೆ ಬೆಲೆಗೆ ಉತ್ತಮ ವೈಶಿಷ್ಟ್ಯಗಳನ್ನು ನೀಡುವ ಸ್ಮಾರ್ಟ್‌ಫೋನ್‌ಗಳು ದುಬಾರಿ ಬೆಲೆಯ ಫೋನ್‌ ಖರೀದಿಸುವವರನ್ನು ತನ್ನತ್ತ ಸೆಳೆದುಕೊಳ್ಳಲು ಯಶಸ್ವಿಯಾಗುತ್ತಿವೆ.ಸದ್ಯಕ್ಕೆ, ಚೀನಾದ ಮೊಬೈಲ್‌ ತಯಾರಿಕಾ ಕಂಪನಿಗಳು ಭಾರತದ ಮಾರುಕಟ್ಟೆಯಲ್ಲಿ ಹೆಚ್ಚಿನ ಮಾರಾಟದ ಪಾಲನ್ನು ಹೊಂದಿವೆ. ಚೀನಾದ ಶಿಯೋಮಿ, ಒಪ್ಪೊ, ವಿವೊ, ಟ್ರಾನ್ಸಿಷನ್‌ ಕಂಪನಿಗಳು ಭಾರತದಲ್ಲಿ ಉತ್ತಮ ಮಾರಾಟ ಪ್ರಗತಿ ದಾಖಲಿಸುತ್ತಿವೆ.

ಪ್ರಮುಖ ಸ್ಮಾರ್ಟ್‌ಫೋನ್‌ ಕಂಪನಿಗಳು:ಶಿಯೋಮಿ, ಸ್ಯಾಮ್ಸಂಗ್‌, ವಿವೊ, ಮೈಕ್ರೊಮ್ಯಾಕ್ಸ್‌ ಮತ್ತು ಒಪ್ಪೊ ಮೂಂಚೂಣಿಯಲ್ಲಿರುವ ಪ್ರಮುಖ 5 ಕಂಪನಿಗಳಾಗಿವೆ. 2018ರ ಮೂರನೇ ತ್ರೈಮಾಸಿಕದಲ್ಲಿ 4.20 ಕೋಟಿ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದ್ದು, ಶೇ 9.1ರಷ್ಟು ಪ್ರಗತಿ ಕಂಡಿದೆ. ಒಟ್ಟಾರೆ ಮೊಬೈಲ್‌ ಫೋನ್‌ ಮಾರುಕಟ್ಟೆಯಲ್ಲಿ ಫೀಚರ್‌ ಮತ್ತು ಸ್ಮಾರ್ಟ್‌ಫೋನ್‌ಗಳ ಕೊಡುಗೆ ಶೇ 50ರಷ್ಟಿದೆ.

ADVERTISEMENT

ಪ್ರೀಮಿಯಂ ಪೋನ್‌ಗಿಲ್ಲ ಬೇಡಿಕೆ

ಗ್ರಾಹಕರು ಪ್ರೀಮಿಯಂ ಫೋನ್‌ಗಳ ಖರೀದಿಗೆ ಅಷ್ಟಾಗಿ ಮನಸ್ಸು ಮಾಡುತ್ತಿಲ್ಲ. ಏಕೆಂದರೆ, ಪ್ರೀಮಿಯಂ ಫೋನ್‌ಗಳಲ್ಲಿರುವ ಗುಣಮಟ್ಟದ ಕ್ಯಾಮೆರಾ, ಹೆಚ್ಚಿನ ಮೆಮೊರಿ, ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ನಂತಹ ಆಯ್ಕೆಗಳು ಮಧ್ಯಮ ಬೆಲೆಯ ಫೋನ್‌ಗಳಲ್ಲಿಯೂ ಲಭ್ಯವಾಗುತ್ತಿವೆ ಎಂದು ಮಾರುಕಟ್ಟೆ ವರದಿಗಳು ತಿಳಿಸಿವೆ.

2019ರಲ್ಲಿ ಆರಂಭಿಕ ಮತ್ತು ಕೈಗೆಟುಕುವ ದರದ ಫೋನ್‌ಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬರಲಿದೆ ಎನ್ನುವುದು ತಜ್ಞರ ಅಭಿಪ್ರಾಯ. 2018ರಲ್ಲಿ 15 ಕೋಟಿ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದ್ದು, ಶೇ 11ರಷ್ಟು ಮಾರಾಟ ಪ್ರಗತಿ ಸಾಧ್ಯವಾಗಿದೆ. ಹೀಗಾಗಿ 2019ರಲ್ಲಿ ಶೇ 12ರಷ್ಟು ಮಾರಾಟ ಪ್ರಗತಿ ಸಾಧಿಸುವ ನಿರೀಕ್ಷೆಯನ್ನು ಮೊಬೈಲ್‌ ತಯಾರಿಕಾ ಕಂಪನಿಗಳು ಹೊಂದಿವೆ.

ಯಾವುದಕ್ಕೆ ಬೇಡಿಕೆ?

‘2018ರಲ್ಲಿ ₹ 14,200 ರಿಂದ ₹ 28,400ರ ಬೆಲೆಯಲ್ಲಿನ ಸ್ಮಾರ್ಟ್‌ಫೋನ್‌ಗಳ ಮಾರಾಟ ಶೇ 20ರಷ್ಟು ಪ್ರಗತಿ ಕಂಡಿದೆ. ಮುಂದಿನ ಐದು ವರ್ಷಗಳವರೆಗೂ ಇದೇ ಬೆಲೆಯೊಳಗಿನ ಪೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇರಲಿದೆ’ ಎಂದು ಕೌಂಟರ್‌ಪಾಯಿಂಟ್‌ ಸಂಸ್ಥೆಯ ಸಂಶೋಧನಾ ಸಹಾಯಕ ನಿರ್ದೇಶಕ ತರುಣ್‌ ಪಾಠಕ್‌ ಅಭಿಪ್ರಾಯಪಟ್ಟಿದ್ದಾರೆ.

₹ 10 ಸಾವಿರದಿಂದ ₹ 15 ಸಾವಿರದೊಳಗಿನ ಫೋನ್‌ಗಳಲ್ಲಿಯೂ ಫುಲ್‌ ಸ್ಕ್ರೀನ್‌ ಡಿಸ್‌ಪ್ಲೆ, ಡ್ಯುಯೆಲ್‌ ಕ್ಯಾಮೆರಾ, ಬಯೊಮೆಟ್ರಿಕ್‌ ಸೆಕ್ಯುರಿಟಿ ಮತ್ತು ಕೃತಕ ಬುದ್ಧಿಮತ್ತೆ ಬೆಂಬಲಿಸುವಂತಹ ಆಯ್ಕೆಗಳು ಬರುತ್ತಿವೆ. ಹೀಗಾಗಿ ದುಬಾರಿ ಬೆಲೆಯ ಫೋನ್ ಖರೀದಿಸುವ ಅಗತ್ಯ ಇಲ್ಲ ಎನ್ನುವುದು ಗ್ರಾಹಕರ ಅಭಿಪ್ರಾಯವಾಗಿದೆ.

ಇಂಡಿಯನ್‌ ಸೆಲ್ಯುಲರ್‌ ಆ್ಯಂಡ್ ಎಲೆಕ್ಟ್ರಾನಿಕ್ಸ್‌ ಅಸೋಸಿಯೇಷನ್‌ ಹೇಳುವಂತೆ, ಭಾರತದಲ್ಲಿ 2018–19ರಲ್ಲಿ ಮೊಬೈಲ್‌ ಹ್ಯಾಂಡ್‌ಸೆಟ್‌ ತಯಾರಿಕೆ ಮೌಲ್ಯ ₹ 1.65 ಲಕ್ಷ ಕೋಟಿಗೆ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.