ADVERTISEMENT

ದೇವನಹಳ್ಳಿ ಬಳಿ ಏರ್‌ ಇಂಡಿಯಾ ಎಂಆರ್‌ಒ ಘಟಕ ನಿರ್ಮಾಣಕ್ಕೆ ಚಾಲನೆ

ದೇವನಹಳ್ಳಿ ಬಳಿ, 35 ಎಕರೆ ಭೂಪ್ರದೇಶದಲ್ಲಿ ಬೃಹತ್ ಘಟಕ ಸ್ಥಾಪನೆಗೆ ಏರ್‌ ಇಂಡಿಯಾ ಕ್ರಮ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 20:35 IST
Last Updated 4 ಸೆಪ್ಟೆಂಬರ್ 2024, 20:35 IST
ಬೆಂಗಳೂರಿನಲ್ಲಿ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಸಂಪೂರ್ಣ ನವೀಕರಣದ (ಎಂಆರ್‌ಒ) ಬೃಹತ್‌ ಘಟಕ ನಿರ್ಮಾಣಕ್ಕೆ ದೇವನಹಳ್ಳಿ ಬಳಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಅಧಿಕಾರಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು ಸೇರಿ ಇತರರು ಚಾಲನೆ ನೀಡಿದರು
ಬೆಂಗಳೂರಿನಲ್ಲಿ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಸಂಪೂರ್ಣ ನವೀಕರಣದ (ಎಂಆರ್‌ಒ) ಬೃಹತ್‌ ಘಟಕ ನಿರ್ಮಾಣಕ್ಕೆ ದೇವನಹಳ್ಳಿ ಬಳಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಅಧಿಕಾರಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು ಸೇರಿ ಇತರರು ಚಾಲನೆ ನೀಡಿದರು   

ಬೆಂಗಳೂರು: ಬೆಂಗಳೂರಿನಲ್ಲಿ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಸಂಪೂರ್ಣ ನವೀಕರಣದ (ಎಂಆರ್‌ಒ) ಬೃಹತ್‌ ಘಟಕ ನಿರ್ಮಾಣಕ್ಕೆ ದೇವನಹಳ್ಳಿ ಬಳಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಬುಧವಾರ ಚಾಲನೆ ನೀಡಿದೆ.

ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿರುವ ಈ ಎಂಆರ್‌ಒ ಘಟಕವನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 35 ಎಕರೆ ಭೂಪ್ರದೇಶದಲ್ಲಿ ನಿರ್ಮಿಸಲಾಗುವುದು. ಏರ್‌ ಇಂಡಿಯಾ ತನ್ನ ವಿಮಾನಗಳನ್ನು ಆಧುನೀಕರಿಸುತ್ತಿರುವುದರ ಜೊತೆಗೆ ತನ್ನ ಜಾಗತಿಕ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿರುವುದರಿಂದ ಈ ಘಟಕವು ಏರ್ ಇಂಡಿಯಾ ಸಮೂಹದ ವಿಮಾನಗಳ ನಿರ್ವಹಣಾ ಸೇವೆಗಳಿಗೆ ಪ್ರಮುಖ ಕೇಂದ್ರವಾಗಿರಲಿದೆ ಎಂದು ಏರ್‌ ಇಂಡಿಯಾ ತಿಳಿಸಿದೆ.

ಈ ಎಂಆರ್‌ಒ ಕೇಂದ್ರವು ಪೂರ್ಣಗೊಂಡ ನಂತರ, ಭಾರತದಲ್ಲಿ ಪರಿಣತ 1,200 ವಿಮಾನಯಾನ ಎಂಜಿನಿಯರ್‌ಗಳಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ 200ಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ (ಎಸ್‌ಎಂಇ) ಬೆಂಬಲ ನೀಡಲಿದೆ. ಈ ಹೊಸ ಉದ್ಯಮಗಳು ಮತ್ತಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವಾಗಲಿರುವುದರ ಜೊತೆಗೆ ರಾಜ್ಯದಲ್ಲಿ ಎಂಆರ್‌ಒ ಪರಿಸರ ವ್ಯವಸ್ಥೆಯನ್ನು ಬಲಪಡಿಸಲಿವೆ. ವಿಮಾನಗಳ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಚಟುವಟಿಕೆಗಳಿಗೆ ತರಬೇತಿ ಪಡೆದ ಸಿಬ್ಬಂದಿಯ ಲಭ್ಯತೆಗಾಗಿ ಬೆಂಗಳೂರಿನಲ್ಲಿ ನಿರ್ವಹಣಾ ತರಬೇತಿ ಸಂಸ್ಥೆ ಸ್ಥಾಪನೆ ಮಾಡುವುದಾಗಿ ಹೇಳಿದೆ.

ADVERTISEMENT

‘ತ್ವರಿತ ಗತಿಯಲ್ಲಿ ಬೆಳೆಯುತ್ತಿರುವ ಭಾರತದ ವಿಮಾನಯಾನ ಕ್ಷೇತ್ರಕ್ಕಷ್ಟೇ ಒಂದು ಮೈಲಿಗಲ್ಲು ಆಗಿರದೆ, ವಿಮಾನಯಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕಕ್ಕೂ ಸಹ ಮಹತ್ವದ ಬೆಳವಣಿಗೆಯಾಗಿದೆ. ಮುಂಬರುವ ವರ್ಷಗಳಲ್ಲಿ ಬೆಂಗಳೂರು ಜಾಗತಿಕವಾಗಿ ಪ್ರಮುಖ ವಿಮಾನಯಾನ ಕೇಂದ್ರವಾಗಿ ಹೊರಹೊಮ್ಮಲಿದೆ’ ಎಂದು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್‌ ಕೃಷ್ಣ ಹೇಳಿದರು.

ಬೆಂಗಳೂರಿನಲ್ಲಿ ಎಂಆರ್‌ಒ ಘಟಕ ಸ್ಥಾಪಿಸಲು ಏರ್ ಇಂಡಿಯಾ ಕರ್ನಾಟಕ ಸರ್ಕಾರದ ಜೊತೆಗೆ ಈ ವರ್ಷದ ಆರಂಭದಲ್ಲಿ ತಿಳಿವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿತ್ತು. ಈ ಘಟಕ ಅಭಿವೃದ್ಧಿಪಡಿಸಲು ಏರ್ ಇಂಡಿಯಾ ತನ್ನ ಪಾಲುದಾರ ಕಂಪನಿಯಾಗಿ ಎಸ್‌ಐಎ ಎಂಜಿನಿಯರಿಂಗ್ ಕಂಪನಿ (ಎಸ್‌ಐಎಇಸಿ) ಜೊತೆಗೂ ಒಪ್ಪಂದ ಮಾಡಿಕೊಂಡಿದೆ.

ಶಿಲಾನ್ಯಾಸ ಸಮಾರಂಭದಲ್ಲಿ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್‌) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್, ಎಸ್‌ಐಎ ಎಂಜಿನಿಯರಿಂಗ್ ಕಂಪನಿಯ ಸಿಇಒ ಚಿನ್ ಯೌ ಸೆಂಗ್, ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್‌ಬೆಲ್ ವಿಲ್ಸನ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.