ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ನಾಲ್ಕನೇ ದಿನವಾದ ಬುಧವಾರವೂ ಸೂಚ್ಯಂಕಗಳು ಏರಿಕೆ ಕಂಡಿವೆ.
ಲೋಹ, ಪವರ್ ಹಾಗೂ ಕೆಲವು ಆಟೊ ಷೇರುಗಳ ಖರೀದಿ ಹೆಚ್ಚಳದಿಂದಾಗಿ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 285 ಅಂಶ ಏರಿಕೆ ಕಂಡು, 81,741 ಅಂಶಗಳಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 93 ಅಂಶ ಏರಿಕೆ ಕಂಡು, 24,951 ಅಂಶಗಳಲ್ಲಿ ಸ್ಥಿರಗೊಳ್ಳುವ ಮೂಲಕ ಹೊಸ ಎತ್ತರಕ್ಕೆ ಜಿಗಿದಿದೆ.
ಸೆನ್ಸೆಕ್ಸ್ ಗುಚ್ಛದಲ್ಲಿನ ಜೆಎಸ್‌ಡಬ್ಲ್ಯು ಸ್ಟೀಲ್, ಏಷ್ಯನ್ ಪೇಂಟ್ಸ್, ಮಾರುತಿ ಸುಜುಕಿ ಇಂಡಿಯಾ, ಎನ್‌ಟಿಪಿಸಿ, ಅದಾನಿ ಪೋರ್ಟ್ಸ್, ಭಾರ್ತಿ ಏರ್‌ಟೆಲ್, ಐಟಿಸಿ ಮತ್ತು ಟೆಕ್ ಮಹೀಂದ್ರ ಕಂಪನಿಯ ಷೇರುಗಳ ಮೌಲ್ಯದಲ್ಲಿ ಏರಿಕೆಯಾಗಿದೆ.
ರಿಲಯನ್ಸ್ ಇಂಡಸ್ಟ್ರಿಸ್, ಇನ್ಫೊಸಿಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಬಜಾಜ್ ಫಿನ್‌ಸರ್ವ್, ಎಕ್ಸಿಸ್ ಬ್ಯಾಂಕ್ ಷೇರಿನ ಮೌಲ್ಯ ಇಳಿಕೆಯಾಗಿದೆ.
ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನ ಮತ್ತು ಬೆಳ್ಳಿ ದರವು ಏರಿಕೆಯಾಗಿದೆ. 10 ಗ್ರಾಂ ಚಿನ್ನದ ದರವು ₹350 ಏರಿಕೆಯಾಗಿದ್ದು ₹71950ಕ್ಕೆ ತಲುಪಿದೆ. ಪ್ರತಿ ಕೆ.ಜಿಗೆ ಬೆಳ್ಳಿ ದರವು ₹1100 ಏರಿಕೆ ಕಂಡಿದ್ದು ₹85600 ಆಗಿದೆ.
ಬಜೆಟ್‌ನಲ್ಲಿ ಸರ್ಕಾರವು ಚಿನ್ನ ಮತ್ತು ಬೆಳ್ಳಿ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸಿದೆ. ಆದರೆ ಹಬ್ಬದ ಋತು ಆರಂಭವಾಗುತ್ತಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಮತ್ತೆ ಹಳದಿ ಲೋಹಕ್ಕೆ ಬೇಡಿಕೆ ಹೆಚ್ಚಿದೆ. ಇದರಿಂದ ಬೆಲೆ ಏರಿಕೆಯಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಅಮೆರಿಕದ ಬಾಂಡ್ ಗಳಿಕೆಯ ಪ್ರಮಾಣ ಇಳಿಕೆಯಾಗಿದೆ. ಡಾಲರ್ ಮೌಲ್ಯವು ಕಡಿಮೆಯಾಗಿದೆ. ಇದರಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ದೃಷ್ಟಿ ನೆಟ್ಟಿದ್ದಾರೆ. ಹಾಗಾಗಿ ಹಳದಿ ಲೋಹದ ದರವು ಹೆಚ್ಚಳವಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.