ಮುಂಬೈ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಮೆಕ್ಸಿಕೊ ಮತ್ತು ಕೆನಡಾ ಮೇಲೆ ಹೇರಿದ್ದ ಸುಂಕವನ್ನು ಒಂದು ತಿಂಗಳಮಟ್ಟಿಗೆ ತಡೆ ಹಿಡಿದಿರುವುದರಿಂದ, ದೇಶದ ಷೇರುಪೇಟೆಯಲ್ಲಿ ಮಂಗಳವಾರ ಗೂಳಿ ಓಟ ಜೋರಾಯಿತು.
ಸೋಲ್, ಟೋಕಿಯೊ ಮತ್ತು ಹಾಂಗ್‌ಕಾಂಗ್ ಮಾರುಕಟ್ಟೆಯೂ ಏರಿಕೆ ದಾಖಲಿಸಿವೆ. ಇದು ದೇಶೀಯ ಸೂಚ್ಯಂಕಗಳು ಶೇ2ರಷ್ಟು ಏರಿಕೆ ಕಾಣಲು ನೆರವಾಯಿತು. ಇದರಿಂದ ಹೂಡಿಕೆದಾರರ ಸಂಪತ್ತು ₹5.95 ಲಕ್ಷ ಕೋಟಿ ಹೆಚ್ಚಳವಾಗಿದೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1,397 ಅಂಶ ಏರಿಕೆ ಕಂಡು(ಶೇ 1.81) ಒಂದು ತಿಂಗಳ ಹಿಂದಿನ ಗರಿಷ್ಠ ಮಟ್ಟವಾದ 78,583 ಅಂಶಗಳಲ್ಲಿ ಸ್ಥಿರಗೊಂಡಿತು. ವಹಿವಾಟಿನ ಒಂದು ಸಂದರ್ಭದಲ್ಲಿ 1,471 ಅಂಶ ಏರಿಕೆ ಕಂಡಿತ್ತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 378 ಅಂಶ ಹೆಚ್ಚಳಗೊಂಡು 23,739 ಅಂಶಗಳಲ್ಲಿ ಮುಕ್ತಾಯಗೊಂಡಿತು.
ಸೆನ್ಸೆಕ್ಸ್ ಗುಚ್ಛದಲ್ಲಿನ ಎಲ್ ಆ್ಯಂಡ್ ಟಿ ಷೇರಿನ ಮೌಲ್ಯದಲ್ಲಿ ಶೇ 5ರಷ್ಟು ಏರಿಕೆಯಾಗಿದೆ. ಅದಾನಿ ಪೋರ್ಟ್ಸ್, ಇಂಡಸ್ ಇಂಡ್ ಬ್ಯಾಂಕ್, ಟಾಟಾ ಮೋಟರ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಅಲ್ಟ್ರಾಟೆಕ್ ಸಿಮೆಂಟ್, ಏಷ್ಯನ್ ಪೇಂಟ್ಸ್ ಷೇರಿನ ಮೌಲ್ಯ ಏರಿಕೆಯಾಗಿದೆ.
ಐಟಿಸಿ ಹೋಟೆಲ್ಸ್, ಜೊಮಾಟೊ, ನೆಸ್ಲೆ ಮತ್ತು ಮಾರುತಿ ಸುಜುಕಿ ಷೇರಿನ ಮೌಲ್ಯ ಇಳಿಕೆಯಾಗಿದೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯು ಶೇ 1.05ರಷ್ಟು ಇಳಿಕೆಯಾಗಿದೆ. ಪ್ರತಿ ಬ್ಯಾರೆಲ್ 75.16 ಡಾಲರ್ ಆಗಿದೆ.
ಸೋಮವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹3,958 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆಯು ಬುಧವಾರದಿಂದ ಆರಂಭವಾಗಲಿದೆ. ಫೆಬ್ರುವರಿ 7ರಂದು ರೆಪೊ ದರ ಕಡಿತ ಸಂಬಂಧ ಗವರ್ನರ್ ಅವರು ಅಧಿಕೃತವಾಗಿ ಮಾಹಿತಿ ನೀಡಲಿದ್ದಾರೆ. ಸಭೆಯ ತೀರ್ಮಾನವು ಮಾರುಕಟ್ಟೆಯ ಏರಿಳಿತದ ಮೇಲೆ ಪರಿಣಾಮ ಬೀರಲಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.