
ನವದೆಹಲಿ: ಪ್ರಸಕ್ತ ಸಕ್ಕರೆ ಮಾರುಕಟ್ಟೆ ವರ್ಷದ ಜನವರಿ 31ರವರೆಗೆ ದೇಶದಲ್ಲಿ 1.95 ಕೋಟಿ ಟನ್ ಸಕ್ಕರೆ ಉತ್ಪಾದನೆ ಆಗಿದೆ ಎಂದು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಒಕ್ಕೂಟ (ಐಎಸ್‌ಎಂಎ) ತಿಳಿಸಿದೆ.
ಅಕ್ಟೋಬರ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯು ಸಕ್ಕರೆ ಮಾರುಕಟ್ಟೆ ವರ್ಷವಾಗಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ಸಕ್ಕರೆ ಉತ್ಪಾದನೆಯು 1.64 ಕೋಟಿ ಟನ್‌ನಷ್ಟಿತ್ತು. ಇದಕ್ಕೆ ಹೋಲಿಸಿದರೆ ಉತ್ಪಾದನೆಯಲ್ಲಿ ಶೇ 18.35ರಷ್ಟು ಹೆಚ್ಚಳವಾಗಿದೆ ಎಂದು ಶನಿವಾರ ತಿಳಿಸಿದೆ.
ವಿವಿಧ ರಾಜ್ಯಗಳಲ್ಲಿನ ಕಬ್ಬು ಇಳುವರಿ ಹೆಚ್ಚಳವೇ ಉತ್ಪಾದನೆ ಹೆಚ್ಚಳಕ್ಕೆ ಕಾರಣ ಎಂದು ಒಕ್ಕೂಟ ತಿಳಿಸಿದೆ.
ಸಕ್ಕರೆ ಉತ್ಪಾದನೆ ಮಾಡುವ ಕಾರ್ಖಾನೆಗಳ ಸಂಖ್ಯೆ ಒಂದು ವರ್ಷದ ಅವಧಿಯಲ್ಲಿ 501ರಿಂದ 515ಕ್ಕೆ ಹೆಚ್ಚಳವಾಗಿದೆ.
ಮಹಾರಾಷ್ಟ್ರವು ದೇಶದಲ್ಲಿ ಅತಿಹೆಚ್ಚು ಸಕ್ಕರೆ ಉತ್ಪಾದನೆ ಮಾಡುವ ರಾಜ್ಯವಾಗಿದ್ದು, ಸಕ್ಕರೆ ಉತ್ಪಾದನೆಯಲ್ಲಿ ಶೇ 42ರಷ್ಟು ಹೆಚ್ಚಳವಾಗಿ, 78.7 ಲಕ್ಷ ಟನ್ ಉತ್ಪಾದನೆ ಆಗಿದೆ. ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆಗಳು 190ರಿಂದ 206ಕ್ಕೆ ಏರಿಕೆಯಾಗಿದೆ.
ಉತ್ತರಪ್ರದೇಶದಲ್ಲಿ 55.1 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿದ್ದು, ಶೇ 5ರಷ್ಟು ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ಶೇ 15ರಷ್ಟು ಸಕ್ಕರೆ ಉತ್ಪಾದನೆಯಲ್ಲಿ ಏರಿಕೆ ಆಗಿದೆ ಎಂದು ತಿಳಿಸಿದೆ.
ಪ್ರಸಕ್ತ ವರ್ಷದ ಸಕ್ಕರೆ ಮಾರುಕಟ್ಟೆ ವರ್ಷದಲ್ಲಿ ಸಕ್ಕರೆ ಉತ್ಪಾದನೆಯು ಶೇ 18.6ರಷ್ಟು ಏರಿಕೆಯಾಗಿ, 3.09 ಕೋಟಿ ಟನ್ ಉತ್ಪಾದನೆ ಆಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.