
ದಾವೋಸ್: ‘ಗ್ರಾಹಕರ ಮನೆ ಬಾಗಿಲಿಗೆ ವಿವಿಧ ಉತ್ಪನ್ನಗಳನ್ನು ತ್ವರಿತವಾಗಿ ತಲುಪಿಸುವ ಡೆಲಿವರಿ ಉದ್ಯೋಗವನ್ನು, ತಮ್ಮ ಅನುಕೂಲದ ವೇಳೆಯಲ್ಲಿ ಮಾಡುವ ಉದ್ಯೋಗ ಎಂದು ನೋಡಬೇಕೇ ಹೊರತು ಗಿಗ್ ಉದ್ಯೋಗವಾಗಿ ಅಲ್ಲ’ ಎಂದು ಸ್ವಿಗ್ಗಿ ಕಂಪನಿಯ ಆಹಾರ ಮಾರುಕಟ್ಟೆ ವಿಭಾಗದ ಸಿಇಒ ರೋಹಿತ್ ಕಪೂರ್ ಹೇಳಿದ್ದಾರೆ.
ಸಂಘಟಿತ ವಲಯದ ಉದ್ಯೋಗವು ದೇಶದ ಉದ್ಯೋಗ ಮಾರುಕಟ್ಟೆಯ ಮೊದಲ ಆಧಾರ ಸ್ತಂಭವಾಗಿದ್ದರೆ, ಉದ್ಯಮಶೀಲತೆಯು ಎರಡನೇ ಆಧಾರ ಸ್ತಂಭವಾಗಿದೆ. ಡೆಲಿವರಿ ಉದ್ಯೋಗವು ಮೂರನೆಯ ಆಧಾರ ಸ್ತಂಭವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಡೆಲಿವರಿ ಉದ್ಯೋಗವು ಜೀವನೋಪಾಯವನ್ನು ಸೃಷ್ಟಿಸುತ್ತದೆ ಎಂದು ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಮ್ಮೇಳನದಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘ಕಳೆದ ವರ್ಷ 25 ಲಕ್ಷ ಜನರು ಸ್ವಿಗ್ಗಿ ವೇದಿಕೆಯಲ್ಲಿ ಕೆಲಸ ಮಾಡಿದ್ದಾರೆ. ಇದು ನಮ್ಮ ವೇದಿಕೆಯಲ್ಲಿ ಕೆಲಸ ಮಾಡಿದವರ ಸಂಖ್ಯೆ ಮಾತ್ರ. ಈ ಮಾರುಕಟ್ಟೆಯು ಇನ್ನಷ್ಟು ಬೆಳೆಯುತ್ತದೆ’ ಎಂದಿದ್ದಾರೆ. ‘ಈ ವಲಯದಲ್ಲಿ ಕೆಲಸ ಮಾಡುವವರು ತಾವಾಗಿಯೇ ಈ ಕೆಲಸ ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.
ಡೆಲಿವರಿ ಉದ್ಯೋಗವನ್ನು ಸಂಘಟಿತ ವಲಯದ ಉದ್ಯೋಗದಿಂದ ಪ್ರತ್ಯೇಕವಾಗಿ ಕಾಣಬೇಕು ಎಂದು ಮನವಿ ಮಾಡಿದ್ದಾರೆ.
ಈ ಉದ್ಯೋಗವನ್ನು ದೀರ್ಘಕಾಲದವರೆಗೆ, ತಿಂಗಳುಗಳಿಗೆ ಮಾತ್ರ ಮಾಡುವವರೂ ಇದ್ದಾರೆ. ಅಲ್ಲದೆ, ಹೆಚ್ಚುವರಿ ಆದಾಯಕ್ಕಾಗಿ ಈ ಕೆಲಸ ಮಾಡುವ ವಿದ್ಯಾರ್ಥಿಗಳು ಮತ್ತು ಎರಡನೇ ಆದಾಯದ ಮೂಲವಾಗಿ ಇದನ್ನು ಮಾಡಲು ಬಯಸುವ ಜನರು ಕೂಡ ಇದ್ದಾರೆ ಎಂದು ಹೇಳಿದ್ದಾರೆ.