ADVERTISEMENT

ನೇರ ತೆರಿಗೆ: ಜುಲೈನಲ್ಲಿ ವರದಿ

ಆದಾಯ ತೆರಿಗೆ ಕಾಯ್ದೆ ಬದಲಿಸುವ ಉದ್ದೇಶ

ಪಿಟಿಐ
Published 25 ಮೇ 2019, 19:41 IST
Last Updated 25 ಮೇ 2019, 19:41 IST

ನವದೆಹಲಿ: ಸದ್ಯಕ್ಕೆ ಜಾರಿಯಲ್ಲಿ ಇರುವ ಆದಾಯ ತೆರಿಗೆ ಕಾಯ್ದೆ ಬದಲಿಸುವ ಉದ್ದೇಶದಿಂದ ಹೊಸ ನೇರ ತೆರಿಗೆ ಕಾಯ್ದೆಯ ಕರಡು ರೂಪಿಸಲು ರಚಿಸಲಾಗಿರುವ ಕಾರ್ಯಪಡೆಗೆ ಮತ್ತೆ ಎರಡು ತಿಂಗಳ ವಿಸ್ತರಣೆ ನೀಡಲಾಗಿದೆ.

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು, ವರದಿ ಸಲ್ಲಿಕೆಯ ಅವಧಿಯನ್ನು ಶುಕ್ರವಾರ ವಿಸ್ತರಿಸಿದ್ದಾರೆ. ಕಾರ್ಯಪಡೆಯು ಇದೇ ತಿಂಗಳಾಂತ್ಯಕ್ಕೆ ವರದಿ ಸಲ್ಲಿಸಬೇಕಾಗಿತ್ತು. ಈಗ ಜುಲೈ 31ಕ್ಕೆ ವರದಿ ಸಲ್ಲಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಅವಧಿ ವಿಸ್ತರಣೆಯಿಂದಾಗಿ ಕಾರ್ಯಪಡೆಯು 2019–20ನೆ ಹಣಕಾಸು ವರ್ಷದ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆ ನಂತರ ತನ್ನ ವರದಿ ಸಲ್ಲಿಸಲಿದೆ. 2014ರಲ್ಲಿ ಲೋಕಸಭಾ ಚುನಾವಣೆ ನಡೆದಾಗ ಜುಲೈ 10ರಂದು ಬಜೆಟ್‌ ಮಂಡಿಸಲಾಗಿತ್ತು. ಸಂಪ್ರದಾಯದಂತೆ ಈ ಹಣಕಾಸು ವರ್ಷದ ಬಜೆಟ್‌ ಅನ್ನು ಜುಲೈ ತಿಂಗಳಲ್ಲಿ ಮಂಡಿಸಲಾಗುವುದು.

ADVERTISEMENT

ಕಾರ್ಯಪಡೆಯ ಸಂಚಾಲಕರಾಗಿದ್ದ ಅರ್ಬಿಂದ್‌ ಮೋದಿ ಅವರ ನಿವೃತ್ತಿ ನಂತರ ಅಖಿಲೇಶ್‌ ರಂಜನ್‌ ಅವರನ್ನು ಹಿಂದಿನ ವರ್ಷದ ನವೆಂಬರ್‌ನಲ್ಲಿ ಈ ಹುದ್ದೆಗೆ ನೇಮಿಸಲಾಗಿತ್ತು.

‘ಆದಾಯ ತೆರಿಗೆ ಕಾಯ್ದೆ 1961’ಅನ್ನು 50 ವರ್ಷಗಳ ಹಿಂದೆ ರಚಿಸಲಾಗಿರುವುದರಿಂದ ಅದಕ್ಕೆ ಹೊಸ ರೂಪ ನೀಡಬೇಕಾಗಿದೆ’ ಎಂದು ಪ್ರಧಾನಿ ಮೋದಿ ಅವರು 2017ರ ಸೆಪ್ಟೆಂಬರ್‌ನಲ್ಲಿ ನಡೆದ ತೆರಿಗೆ ಅಧಿಕಾರಿಗಳ ಸಮ್ಮೇಳನದಲ್ಲಿ ಅಭಿಪ್ರಾಯಪಟ್ಟಿದ್ದರು.

ಜಾಗತಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಕರಡು ನೀತಿ ರೂಪಿಸಲು ಕಾರ್ಯಪಡೆಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.