ನವದೆಹಲಿ: ‘ಮುಂದಿನ 10ರಿಂದ 15 ವರ್ಷಗಳಲ್ಲಿ ಗರಿಷ್ಠ 1.5 ಕೋಟಿ ಟನ್ ಉಕ್ಕನ್ನು ಮರುಬಳಕೆ ಮಾರ್ಗದ ಮೂಲಕ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ’ ಎಂದು ಟಾಟಾ ಸ್ಟೀಲ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ.ವಿ.ನರೇಂದ್ರನ್ ಹೇಳಿದ್ದಾರೆ.
ಕಂಪನಿಯು ಭಾರತ ಮತ್ತು ಯುರೋಪ್‌ನಲ್ಲಿ ಕಡಿಮೆ ಇಂಗಾಲ ಹೊರಸೂಸುವ ಉಕ್ಕು ಉತ್ಪಾದನೆ ತಂತ್ರಜ್ಞಾನವನ್ನು ಈಗಾಗಲೇ ಅಳವಡಿಸಿಕೊಳ್ಳುತ್ತಿದೆ ಎಂದಿದ್ದಾರೆ.
ಕಂಪನಿಯ ಒಟ್ಟು ಉತ್ಪಾದನಾ ಸಾಮರ್ಥ್ಯ 3.5 ಕೋಟಿ ಟನ್ ಆಗಿದೆ. 2024–25ರ ಆರ್ಥಿಕ ವರ್ಷದಲ್ಲಿ 3 ಕೋಟಿ ಟನ್ ಉಕ್ಕನ್ನು ಉತ್ಪಾದಿಸಿದೆ. ಭಾರತ, ಬ್ರಿಟನ್, ನೆದರ್ಲೆಂಡ್ಸ್ ಮತ್ತು ಥಾಯ್ಲೆಂಡ್‌ನಲ್ಲಿ ಘಟಕಗಳನ್ನು ಕಂಪನಿ ಹೊಂದಿದೆ. 2030ರ ವೇಳೆಗೆ 4 ಕೋಟಿ ಟನ್ ಉಕ್ಕನ್ನು ಉತ್ಪಾದನೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ದೆಹಲಿಯ ಬಳಿ ಮರುಬಳಕೆ ಆಧಾರಿತ ಉಕ್ಕು ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ. ಲೂಧಿಯಾನಾದಲ್ಲಿ 7.5 ಲಕ್ಷ ಟನ್ ಸಾಮರ್ಥ್ಯ ಹೊಂದಿರುವ ಇಂತಹ ಘಟಕ ಸ್ಥಾಪಿಸಲಾಗುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಇದು ಕಾರ್ಯಾಚರಣೆ ಆರಂಭಿಸಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.