ADVERTISEMENT

ನಿರ್ಮಲಾ ದಿಟ್ಟ ನಿರ್ಧಾರ; ಎಫ್‌ಕೆಸಿಸಿಐ

‘ಎಸ್‌ಎಂಇ’ಗೆ ಹೆಚ್ಚಿನ ಪ್ರಯೋಜನ ದೊರೆಯದು: ಕಾಸಿಯಾ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 19:44 IST
Last Updated 21 ಸೆಪ್ಟೆಂಬರ್ 2019, 19:44 IST
ಆರ್‌. ರಾಜು ಹಾಗೂ ಸಿ. ಆರ್‌. ಜನಾರ್ಧನ
ಆರ್‌. ರಾಜು ಹಾಗೂ ಸಿ. ಆರ್‌. ಜನಾರ್ಧನ   

ಬೆಂಗಳೂರು: ಕಾರ್ಪೊರೇಟ್‌ ತೆರಿಗೆಯನ್ನು ಶೇ 34.94ರಿಂದ ಶೇ 22ಕ್ಕೆ ತಗ್ಗಿಸಿರುವುದು ಆರ್ಥಿಕ ಹಿಂಜರಿತಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರವಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ (ಎಫ್‌ಕೆಸಿಸಿಐ) ಪ್ರತಿಕ್ರಿಯಿಸಿದೆ.

‘ಕಂಪನಿಗಳ ತೆರಿಗೆ ಹೊರೆ ಇಳಿಯುವುದರಿಂದ ವಿದೇಶಿ ಹೂಡಿಕೆ ಪ್ರಮಾಣ ಹೆಚ್ಚಳಗೊಳ್ಳಲಿದೆ. ಹೊಸ ತಯಾರಿಕಾ ಘಟಕಗಳಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ. ಷೇರುಪೇಟೆಗೆ ಮರಳಿರುವ ಚೇತರಿಕೆಯು ತಯಾರಿಕಾ ಚಟುವಟಿಕೆಗಳನ್ನು ಹೆಚ್ಚಿಸಿ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆ ನಂತರ ಕೈಗೊಂಡಿರುವ ಅತಿದೊಡ್ಡ ದಿಟ್ಟ ನಿರ್ಧಾರ ಇದಾಗಿದೆ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್‌. ಜನಾರ್ದನ ಅವರು ಪ್ರತಿಕ್ರಿಯಿಸಿದ್ದಾರೆ.

ಹೆಚ್ಚಿನ ಪ್ರಯೋಜನ ಇಲ್ಲ; ಕಾಸಿಯಾ: ಕಂಪನಿ ತೆರಿಗೆ ಕಡಿತದ ನಿರ್ಧಾರದಿಂದ ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳಿಗೆ ಹೆಚ್ಚಿನ ಪ್ರಯೋಜನ ಆಗುವುದಿಲ್ಲ ಎಂದು ಕರ್ನಾಟಕ ಸಣ್ಣ ಕೈಗಾರಿಕಾ ಸಂಘ (ಕಾಸಿಯಾ) ಅಭಿಪ್ರಾಯಪಟ್ಟಿದೆ.

ADVERTISEMENT

‘ಹೊಸ ಕೈಗಾರಿಕೆಗಳಿಗೆ ತೆರಿಗೆ ಕಡಿತದ ವಿನಾಯ್ತಿ ಅನ್ವಯಿಸುವುದಕ್ಕಿಂತ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮತ್ತು ಹಲವು ಪ್ರತಿಕೂಲತೆಗಳನ್ನು ಎದುರಿಸುತ್ತಿರುವ ಸಣ್ಣ ಕೈಗಾರಿಕಾ ಘಟಕಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕಾಗಿತ್ತು. ಸಾಲ ಮರುಪಾವತಿ ವಿಳಂಬ ಆಗುವುದನ್ನು ವಸೂಲಾಗದ ಸಾಲ (ಎನ್‌ಪಿಎ) ಎಂದು ಪರಿಗಣಿಸುವುದಕ್ಕೆ ಹೆಚ್ಚಿನ ಕಾಲಾವಕಾಶ ನೀಡಿರುವುದು ಸ್ವಾಗತಾರ್ಹ. ವಹಿವಾಟು ಮಂದಗತಿಯಲ್ಲಿದ್ದರೂ ‘ಎಸ್‌ಎಂಇ’ಗಳು ಬಡ್ಡಿ ದರ ಪಾವತಿಸಬೇಕಾಗಿದೆ. ಬಡ್ಡಿ ದರಗಳಲ್ಲಿ ರಿಯಾಯ್ತಿಯನ್ನೂ ನೀಡಿದ್ದರೆ ಮಾತ್ರ ಸಂಕಷ್ಟದಲ್ಲಿ ಇರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚಿನ ಪ್ರಯೋಜನ ಆಗುತ್ತಿತ್ತು’ ಎಂದು ‘ಕಾಸಿಯಾ’ ಅಧ್ಯಕ್ಷ ಆರ್‌. ರಾಜು ಅವರು ಹೇಳಿದ್ದಾರೆ.

‘ಪ್ರತಿ ಮೂರು ತಿಂಗಳಿಗೊಮ್ಮೆ ಜಿಎಸ್‌ಟಿ ಪಾವತಿಸಲು ಅವಕಾಶ ಮಾಡಿಕೊಡಬೇಕಿತ್ತು. ಗಮನಾರ್ಹ ಪ್ರಮಾಣದಲ್ಲಿ ಉದ್ಯೋಗ ಅವಕಾಶ ಕಲ್ಪಿಸಿರುವ ‘ಎಸ್‌ಎಂಇ’ಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ಇನ್ನೂ ಹೆಚ್ಚಿನ ನೆರವು ಬೇಕಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.